ಆನೆ ಕಾರಿಡಾರ್ ವಿಸ್ತರಣೆಗೆ ಸಿದ್ಧತೆ
ಕ.ಪ್ರ.ವಾರ್ತೆ , ಮೈಸೂರು , ಜು. 1
ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯು ಬಂಡೀಪುರ ವ್ಯಾಪ್ತಿಯಲ್ಲಿನ ಆನೆ ಕಾರಿಡಾರ್ ಪ್ರದೇಶದ ವಿಸ್ತರಣೆಗೆ ಮುಂದಾಗಿದೆ.
ಅತಿ ಹೆಚ್ಚು ಆನೆ ಮತ್ತು ಹುಲಿ ಹೊಂದಿರುವ ಖ್ಯಾತಿ ಇರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಕಣಿಯನಪುರ ಬಳಿ ಆನೆ ಕಾರಿಡಾರ್ ವಿಸ್ತರಿಸಬೇಕಾದ ಅನಿವಾರ್ಯತೆ ಇದೆ. ಈಗ ಪ್ರಸ್ತುತ ಕರ್ನಾಟಕ ಮತ್ತು ತಮಿಳುನಾಡು ವ್ಯಾಪ್ತಿಯ ಕಾಡು ಸಂಧಿಸುವ ಈ ಸ್ಥಳದಲ್ಲಿ ಕೇವಲ 91.02 ಎಕರೆ ಮಾತ್ರ ಇದೆ.
ಆನೆಗಳು ಸ್ವತಂತ್ರವಾಗಿ ಸಂಚರಿಸಲು ಮತ್ತು ಆಹಾರಕ್ಕಾಗಿ ವಲಸೆ ಹೋಗಲು ಈಗ ದುಸ್ತರವಾಗಿದೆ. ಈ ಕಾರಣಕ್ಕೆ ಈ ಪ್ರದೇಶವನ್ನು ವಿಸ್ತರಿಸುವ ಉದ್ದೇಶ ಇದೆ. ಆನೆಗಳು ವಲಸೆ ಹೋಗುವಾಗ ಕಾಡಂಚಿನ ಗ್ರಾಮಗಳ ಮೂಲಕವೂ ತೆರಳುವ ಸಾಧ್ಯತೆಯಿರುತ್ತದೆ. ಆಘ ಆನೆ ಮತ್ತು ಮಾನವ ಸಂಘರ್ಷ ಹೆಚ್ಚುತ್ತದೆ. ಹೀಗೆ ಕಿರಿದಾದ ಆ ಪ್ರದೇಶದಲ್ಲಿ ಆನೆಗಳು ತೆರಳುವುದನ್ನೇ ಬೇಟೆಗಾರರು ಹೊಂಚು ಹಾಕಿ ಕಾಯುವ ಆತಂಕವೂ ಇದೆ.
ಸಮಸ್ಯೆಗೆ ಸರ್ಕಾರದ ಪರಿಹಾರ: ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಆ ಪ್ರದೇಶದಲ್ಲಿನ 5,550 ಎಕರೆ ಕಂದಾಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಗೆ ಸೇರಿಸಲು ಉದ್ದೇಶಿಸಲಾಗಿದೆ. ಕಂದಾಯ ಇಲಾಖೆಯೂ ಸರ್ವೇ ನಡೆಸಿದೆ. ಸದ್ಯದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳವ ನಿರೀಕ್ಷೆ ಇದೆ. ಆಗ ಅರಣ್ಯ ಪ್ರಮಾಣ ಹೆಚ್ಚಾಗಿ, ಆನೆ ಕಾರಿಡಾರ್ ವಿಸ್ತರಣೆಗೆ ಅನುಕೂಲವಾಗಲಿದೆ.
ಜಮೀನು ನೀಡಲು ಮುಂದಾದ ರೈತರು: ಅರಣ್ಯ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಜೀವ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವನ್ನು ವ್ಯವಸಾಯ ಮತ್ತು ಜಾನುವಾರಿನ ಮೇವಿಗೆ ಮಾತ್ರ ಬಳಸಬಹುದು ಎಂಬ ನಿಯಮವಿದೆ. ಆದರೆ ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಉದ್ದೇಶಿತ ಚಟುವಟಿಕೆ ಅಂದರೆ, ಹೊಟೇಲ್, ರೆಸಾರ್ಟ್ ಮುಂತಾದ ಕಟ್ಟಡ ನಿರ್ಮಿಸಲು ಅನುಮತಿ ಇಲ್ಲ. ಆದ್ದರಿಂದ ಈ ಭಾಗದ ಬಹಳ ರೈತರು ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ಮಾರಲು ಮುಂದಾಗಿದ್ದಾರೆ.
ಈ ಜಮೀನನ್ನು ಸ್ವತಃ ರೈತರೇ ಮಾರಲು ಮುಂದಾಗಿರುವುದರಿಂದ ಸುಮಾರು 46 ಲಕ್ಷ ನೀಡಿ ಜಮೀನು ವಶಕ್ಕೆ ಪಡೆಯುವ ಸಂಬಂಧ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡಿದರೆ ಜಮೀನು ವಶಕ್ಕೆ ಪಡೆಯುವುದಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಕಾಂತರಾಜು ತಿಳಿಸಿದರು.
91.02 ಲಕ್ಷ ಪ್ರಸ್ತಾವನೆ: ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬಂಡೀಪುರ ವ್ಯಾಪ್ತಿಯಲ್ಲಿ ವಿವಿಧ ಪರಿಹಾರ ಧನ ನೀಡಲು ಅನುಕೂಲವಾಗುವಂತೆ 91.02 ಲಕ್ಷ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
- ಡಿ.ಎನ್. ಮಹೇಂದ್ರ