ಎನ್‌ಟಿಎಂಎಸ್ ಶಾಲೆ ಆವರಣದಲ್ಲೇ ವಿವೇಕಾನಂದ ಸ್ಮಾರಕ ನಿರ್ಮಾಣವಾಗಲಿ
ಕ.ಪ್ರ.ವಾರ್ತೆ , ಮೈಸೂರು , ಜು. 1
ನಗರದ ಎನ್‌ಟಿಎಂಎಸ್ ಶಾಲೆ ಆವರಣದಲ್ಲಿ ದೇಶಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕು ಎಂದು ಸಾಹಿತಿ ಪ್ರೊ. ದೇಜಗೌ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ವಾಮಿ ವಿವೇಕಾನಂದ ವಿಚಾರ ವೇದಿಕೆ ಸಂಯುಕ್ತವಾಗಿ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಸ್ಮಾರಕ ಅಗತ್ಯ ಮತ್ತು ಸತ್ಯ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ವಿರೋಧಿಸುವವರಿಗೆ ವಿವೇಕದ ಕೊರತೆ, ಎನ್‌ಟಿಎಂಎಸ್ ಶಾಲೆಯಲ್ಲಿ ಮಕ್ಕಳ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಆ ಶಾಲೆಯನ್ನು ಪಕ್ಕದ ಶಾಲೆಯೊಂದಿಗೆ ವಿಲೀನಗೊಳಿಸುವುದರಲ್ಲಿ ತಪ್ಪಿಲ್ಲ. ಐದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಶಾಲೆಗಳನ್ನು ಮುಚ್ಚುವ ಮೂಲಕ ಸರ್ಕಾರದ ಹಣ ಉಳಿಸಬೇಕು ಎಂದು ಹೇಳಿದರು.
ಕನ್ನಡ ವಿಚಾರದಲ್ಲಿ ನನ್ನಷ್ಟು ಹೋರಾಟ ಮಾಡಿದವರು ಮತ್ತೊಬ್ಬರಿಲ್ಲ. ಎನ್‌ಟಿಎಂಎಸ್ ಶಾಲೆ ಉಳಿಸುವ ವಿಚಾರದಲ್ಲಿ ಮಾತ್ರ ಕನ್ನಡಪ್ರೇಮ ತೋರಿಸಿದರೆ ಸಾಲದು. ಕೇರಳ ಸರ್ಕಾರ ಮಲಯಾಳಂ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ ನೀಡುವ ನೀತಿ ಜಾರಿಗೆಗೊಳಿಸಿದೆ.
ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ ನೀಡುವ ನೀತಿ ಜಾರಿಯಾಗಬೇಕು. ಇಂತಹ ಪರಿಣಾಮಕಾರಿ ಕ್ರಮಗಳಿಂದ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದು ತಿಳಿಸಿದರು.
ವಿವೇಕಾನಂದರು ಮೇಲ್ವರ್ಗದವರಿಗೆ ಮಾತ್ರ ಸೀಮಿತರಾಗಿದ್ದರು ಎಂದು ಕೆಲವರು ಟೀಕಿಸುತ್ತಾರೆ. ಆದರೆ, ಅವರು ಅಸ್ಪೃಶ್ಯರು, ದೀನ ದಲಿತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂಬುದನ್ನು ಮರೆಯಬಾರದು. ವಿವೇಕಾನಂದರ ಸ್ಮಾರಕ ನಿರ್ಮಾಣ ವಿರೋಧಿಸುವವರು ಇನ್ನಾದರೂ ಹಠಮಾರಿತನ ಬಿಟ್ಟು ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಆಶಿಸಿದರು.
ಕನ್ನಡ ಪ್ರೀತಿ ಸೀಮಿತಬೇಡ: ಸಿಪಿಕೆ
ಸಾಹಿತಿ ಡಾ. ಸಿಪಿಕೆ ಮಾತನಾಡಿ, ಕನ್ನಡ ಪ್ರೀತಿ ಕೇವಲ ಎನ್‌ಟಿಎಂಎಸ್ ಶಾಲೆಗೆ ಮಾತ್ರ ಸೀಮಿತವಾಗಬಾರದು. ಶಾಲೆ ಬಗ್ಗೆ ಮಾತನಾಡುವವರು ಕನ್ನಡ ಭಾಷೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮಾತನಾಡುವುದಿಲ್ಲ. ಶಾಲೆಯ ಸಮಾಧಿ ಮೇಲೆ ವಿವೇಕಾನಂದ ಸ್ಮಾರಕ ನಿರ್ಮಿಸುವುದಿಲ್ಲ. ಆ ಶಾಲೆಯೂ ಪಕ್ಕದ ಶಾಲೆಯೊಂದಿಗೆ ವಿಲೀನವಾಗುತ್ತದೆ. ಹೀಗಾಗಿ ಹೋರಾಟಗಾರರು ಎನ್‌ಟಿಎಂಎಸ್ ಶಾಲೆಯ ಕೂಪ ಮಂಡೂಕ ಆಗಬಾರದು ಎಂದು ಹೇಳಿದರು. ಕೆಲವರು ಸ್ಮಾರಕ ನಿರ್ಮಿಸಬಾರದೆಂದು ಹೀನವಾಗಿ ಟೀಕಿಸುತ್ತಿರುವುದು ಖಂಡನಿಯ. ನಮ್ಮನ್ನು ಕನ್ನಡ, ದಲಿತ ವಿರೋಧಿ ಎಂದು ಟೀಕಿಸಲಾಗುತ್ತಿದೆ. ಆದರೆ, ನಮ್ಮಷ್ಟು ಕನ್ನಡಕ್ಕಾಗಿ ಹೋರಾಟ ಮಾಡಿದವರ ಸಂಖ್ಯೆ ತೀರಾ ಕಡಿಮೆ. ನಾವು ಕನ್ನಡದ ಬಗ್ಗೆ ಹೊಂದಿರುವ ಪ್ರೀತಿ ಪ್ರಶ್ನಾತೀತ ಎಂದು ತಿಳಿಸಿದರು. ಸಾಹಿತಿ ಡಾ. ಪ್ರಭುಶಂಕರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ. ಮಳಲಿ ವಸಂತಕುಮಾರ್, ಪ್ರೊ. ಕೆ. ಭೈರವಮೂರ್ತಿ, ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ. ಅನಂತಪದ್ಮನಾಭ, ಪ್ರೊ. ಕೆ.ಬಿ. ಪ್ರಭುಪ್ರಸಾದ್, ಡಿ.ಎನ್. ಲೋಕಪ್ಪ, ಪಾಲಿಕೆ ಸದಸ್ಯ ಡಿ. ನಾಗಭೂಷಣ ಇದ್ದರು.