ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಔಷಧ ಸಿಂಪರಣೆಯಿಂದಲೇ ಬೆಳೆ ನಾಶ!

Vishwanath S
Updated On : 2 Jul 2013, 12:51 pm

ಕ.ಪ್ರ.ವಾರ್ತೆ ,  ಹುಣಸೂರು ,  ಜು. 1
ತಂಬಾಕು ಮಂಡಳಿಯ ಶಿಫಾರಸು ಮೇರೆಗೆ ಪೈಟಾನ್-ಟಿ ಮತ್ತು ಜಿಯಲ್‌ಸ್ಟಿನ್ ಕಂಪನಿಯ ರಾಸಾಯನಿಕ ಔಷಧಿಯನ್ನು ಮಿಶ್ರಣ ಮಾಡಿ ತಂಬಾಕಿಗೆ ಸಿಂಪಡಿಸಿದ ರೈತರ ತಂಬಾಕು ಗಿಡ ಬೆಂದು ಹೋಗಿ ಸಾಕಷ್ಟು ತಂಬಾಕು ಬೆಳೆ ನಷ್ಟ ಸಂಭವಿಸಿದೆ.
ತಾಲೂಕಿನ ಹನಗೋಡು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ತಂಬಾಕು ಬೆಳೆಗೆ ರೈತರು ಸಿಂಪಡಿಸಿದ ಕೆಲವೇ ಕ್ಷಣದಲ್ಲಿ ಸಸಿಗಳೆಲ್ಲಾ ಬೆಂದು ಹೋಗಿ ಲಕ್ಷಾಂತರ ರು. ನಷ್ಟ ಸಂಭವಿಸಿ ರೈತಾಪಿ ವರ್ಗ ಕಂಗಲಾಗಿದ್ದಾರೆ.
ಹೆಗ್ಗಂದೂರು ಗ್ರಾಮದ ಕಲ್ಯಾಣಮ್ಮ ಟಿಬಿಜಿಆರ್ ನಂ. 61-314-053 ಮತ್ತು ದಾಸನಪುರದ ಕಾಳೇಗೌಡ ಎಂಬವರು ತಂಬಾಕು ಬೆಳೆಗಾರರಾಗಿದ್ದು, ಇತ್ತೀಚೆಗೆ ಹೆಚ್ಚಿನ ಇಳುವರಿಗಾಗಿ ಮಂಡಳಿ ವತಿಯಿಂದ ಅಧಿಕೃತ ರಾಸಾಯನಿಕ ಮಾರಾಟಗಾರರು ಗ್ರಾಮಕ್ಕೆ ಬಂದು ವಿತರಿಸುವ ಪೈಟಾನ್- ಟಿ ಮತ್ತು ಜಿಯಲ್‌ಸ್ಟಿನ್- ಎಂಬ ರಾಸಾಯನಿಕ ಮಿಶ್ರಣ ಮಾಡಿ ತಂಬಾಕಿಗೆ ಸಿಂಪಡಿಸಿದ್ದರು. ಇದಕ್ಕಾಗಿ ಕಂಪನಿಯಿಂದ ಖರೀದಿಸಿದ ಅಧಿಕೃತ ಬಿಲ್ ಸಹ ಪಡೆದುಕೊಂಡಿದ್ದಾರೆ. ಈ ಎರಡೂ ಔಷಧ ಪಡೆದ ರೈತರು ಕಾರ್ಡುಗಳಲ್ಲಿ ದಾಖಲು ಮಾಡಿಸಿರುತ್ತಾರೆ.
ಪೈಟಾನ್- ಟಿ ಪ್ರತಿ ಲೀಟರ್‌ಗೆ 610 ಇದೆ. ಜಿಯಲ್‌ಸ್ಟಿನ್ ಪೌಡರ್ ಒಂದು- ಕೆಜಿಗೆ 275 ಇದ್ದು, ಈ ಹಣವನ್ನು ಮಂಡಳಿಗೆ ಹೊಗೆಸೊಪ್ಪು ಮಾರಾಟ ಮಾಡಿದ ನಂತರ ಮಂಡಳಿಯವರೆ ಮಾರಾಟಗಾರರಿಗೆ ಬಂದ ಹಣದಲ್ಲಿ ರೈತರಿಂದ ಕಂಪನಿಗೆ ಮರಳಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಮಾರಾಟಗಾರರಿಗೆ ಕಾರ್ಡ್ ಸಹ ನೀಡುತ್ತಾರೆ. ಅದರಲ್ಲಿ ದಾಖಲಾಗಿದೆ.
ಮೂರೂವರೆ ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆದ ಕಲ್ಯಾಣಮ್ಮನಿಗೆ ನಾಲ್ಕು ಲೀಟರ್ ಪೈಟಾನ್-ಟಿ ಮತ್ತು ಎರಡು ಕೆಜಿ ಜಿಯಲ್‌ಸ್ಟಿನ್ ಖರೀದಿಸಿದ್ದಾರೆ. 2,990 ಅಧಿಕೃತ ರಸೀದಿ ಪಡೆದಿದ್ದು, ಮಂಡಳಿ ಶಿಫಾರಸು ಮಾಡಿದ ಔಷಧಿ ಸಿಂಪಡಿಸಿದ ಕೂಡಲೆ ತಂಬಾಕು ಬೆಂದು ಹೋಗಿದೆ. ಇದರಿಂದ ಕಂಗಾಲಾದ ಕಲ್ಯಾಣಮ್ಮ ಕೂಡಲೆ ತಂಬಾಕು ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ಅಧಿಕಾರಿಗಳ ಸಮಕ್ಷಮದಲ್ಲಿ ಮತ್ತೊಮ್ಮೆ ರಾಸಾಯನಿಕ ಸಿಂಪಡಿಸಿದಾಗಲೂ ಹೊಗೆಸೊಪ್ಪುಗಳೆಲ್ಲ ಬೆಂದು ಹೋಗಿರುವ ಬಗ್ಗೆ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ತಂಬಾಕು ಬೆಳೆಗೆ ಸಿಂಪಡಿಸದ ಬಳಿಕ ಸುಟ್ಟು ಹೋಗಿದ್ದನ್ನು ಗಮನಿಸಿದ ಅಧಿಕಾರಿಗಳು, ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬ ಹಾರಿಕೆ ಉತ್ತರ ನೀಡಿ ಗ್ರಾಮದಿಂದ ಮಂಡಳಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿ ಈ ಬಗ್ಗೆ ಲಿಖಿತವಾಗಿ ದೂರು ನೀಡಿ ತನಿಖೆ ನಡೆಸುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆ.
ರಾಸಾಯನಿಕ ವಿತರಣೆಯಲ್ಲಿ ಹರಾಜು ಮಾರುಕಟ್ಟೆ ಅಧಿಕಾರಿಗಳು ಮತ್ತು ಅಧಿಕೃತ ಕ್ರಿಮಿನಾಶಕ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡು ರೈತರನ್ನು ವಂಚಿಸುತ್ತಿರುವುದು ಒಂದೆಡೆಯಾದರೆ, ದಾಸನಪುರದ ಕಾಳೇಗೌಡರ ಜಮೀನಿನಲ್ಲಾದ ಘಟನೆಯಿಂದ ವಿಚಲಿತರಾದ ಔಷಧ ಮಾರಾಟ ಪ್ರತಿನಿಧಿ ಕೇವಲ 15 ಸಾವಿರ ನೀಡಿ ಅಧಿಕೃತ ರಸೀದಿ ಪಡೆದುಕೊಂಡಿದ್ದಾರೆ.
ಮಂಡಳಿಯಿಂದ ಜಿಯಲ್‌ಸ್ಟಿನ್ ಮಾತ್ರ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದೇವೆ. ಆದರೆ, ಪೈಟಾನ್- ಟಿ ರೈತರಿಗೆ ವಿತರಿಸುವ ವಿಷಯ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಮಗೆ ದೂರು ಬಂದಿದೆ. ತಾವು ಸಂಶೋಧನಾ ಕೇಂದ್ರ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ರೈತರಿಗೆ ತಿಳಿಸಿದ್ದೇನೆ ಎಂದು ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆ ಅಧೀಕ್ಷಕ ಪುರುಷೋತ್ತಮ್ ಅರಸು ಕನ್ನಡಪ್ರಭಕ್ಕೆ ತಿಳಿಸಿದರು.
ಔಷಧ ಮಾರಾಟಗಾರರು ತಾಲೂಕಿನಾದ್ಯಂತ ಪ್ರತಿ ಗ್ರಾಮದ ರೈತರ ಬಳಿ ಇರುವ ತಂಬಾಕು ಮಾರಾಟದ ಕಾರ್ಡಿನಲ್ಲಿ ನಮೂದಿಸಿ ಪೈಟಾನ್- ಟಿ ಮತ್ತು ಜಿಯಲ್‌ಸ್ಟಿನ್ ಮಾರಾಟ ಮಾಡಿದ್ದು, ಮಂಡಳಿ ಅಧಿಕಾರಿಗಳು ಕ್ರಿಮಿನಾಶಕ ಕಂಪನಿಯೊಂದಿಗೆ ಸೇರಿ ರೈತರಿಗೆ ಮೋಸ ಮಾಡುತ್ತಿದ್ದಾರೆಂದು ಕಲ್ಯಾಣಮ್ಮರ ಪುತ್ರ ರಮೇಶ್ ಆರೋಪಿಸಿ, ಈ ಬಗ್ಗೆ ಮಂಡಳಿ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ನಷ್ಟ ಹೊಂದಿದವರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

-ಧರ್ಮಾಪುರ ನಾರಾಯಣ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement