ಕಲೆ ಕ್ಷೇತ್ರದಲ್ಲಿ ತಮಿಳುನಾಡು ಸಾಧನೆ ಅಪಾರ
ಕ.ಪ್ರ.ವಾರ್ತೆ , ನಂಜನಗೂಡು , ಜು. 1
ಸಂಗೀತವೂ ಸೇರಿದಂತೆ ಕಲೆ, ಸಾಹಿತ್ಯ, ಸಿನಿಮಾ ರಂಗದಲ್ಲಿ ನೆರೆಯ ತಮಿಳುನಾಡಿನ ಸಾಧನೆ ಕರ್ನಾಟಕಕ್ಕಿಂತ ಹೆಚ್ಚಿನದು ಎಂದು ಸ್ವತಃ ಕಲಾವಿದೆಯೂ ಆದ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.
ಸುತ್ತೂರು ಮಠದ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಭಾನುವಾರ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ತ್ರಿಮೂರ್ತಿಗಳ ಆರಾಧನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಚೆನ್ನೈ ಸಾಂಸ್ಕೃತಿಕವಾಗಿ ಸಾಧನೆ ಮಾಡಿರಲು ಬೇರೆಯದೆ ಕಾರಣಗಳಿವೆ ಎಂದು ಹೇಳಿದ ಅವರು, ಕಲೆ, ಜಾತಿ, ಧರ್ಮ, ಭಾಷೆ, ವ್ಯಕ್ತಿಯನ್ನು ಮೀರಿದ್ದಾಗಿದೆ. ಯಾವುದೆ ಭೇದವಿಲ್ಲದು ಜಗತ್ತು ಎಂದರೆ ಅದು ಕಲಾಕ್ಷೇತ್ರ ಮಾತ್ರ. ಭಾಷೆ ಹೊರತುಪಡಿಸಿಯೂ ಮನಸ್ಸನ್ನು ಮುದಗೊಳಿಸುವ ಶಕ್ತಿ ವಾದ್ಯ ಸಂಗೀತಕ್ಕಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಶಾಸಕ ವಾಸು ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಮಾಜಮುಖಿಯಾದ ಎಲ್ಲ ರಂಗಗಳಲ್ಲಿಯೂ ಶ್ರೀಮಠ ತನ್ನನ್ನು ತೊಡಗಿಸಿಕೊಂಡು ಅಪಾರ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು,.
ಸಮಾಜ ಹೆಚ್ಚು ಹೆಚ್ಚು ಸುಸಂಸ್ಕೃತವಾಗುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಲಾವಿದರ ಕೊರತೆ: ಸಂಗೀತ ಸಭಾದ ಅಧ್ಯಕ್ಷ ವಿ.ಎಸ್. ಮಹಾದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರಿನಂತಹ ನಗರ ಪ್ರದೇಶಗಳಲ್ಲಿ ಸಂಗೀತ ಕುರಿತಂತೆ ಜನರ ಅಭಿರುಚಿ ಕಡಿಮೆಯಾಗುತ್ತಿದೆ. ಇಂತಹ ಕಡೆಗಳಲ್ಲಿ ಮಾತ್ರ ತುಂಬಿದ ಸಭಿಕರನ್ನು ಕಾಣಲು ಸಾಧ್ಯ. ಆದರೆ, ಇಂತಹ ಸಂಗೀತೋತ್ಸವಗಳಲ್ಲಿ ಕಲಾವಿದರ ಕೊರತೆಯೆ ಎದ್ದು ಕಾಣುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಆಶೀರ್ವಚನ ನೀಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಂಗೀತ ಎಂದರೆ ತಪಸ್ಸು. ಎಲ್ಲರಿಗೂ ಒಲಿಯಲು ಸಾಧ್ಯವಿಲ್ಲ. ಸಂಗೀತ ಕಲಿಯಲು ಹಾಗೂ ಕೇಳಲು ಸಂಸ್ಕಾರ ಬೇಕು ಎಂದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಯೊಲಿನ್ ವಿದ್ವಾನ್ ಎಂ. ನಾಗರಾಜ್ ಮತ್ತು ಚೆನ್ನೈನ ಮೃದಂಗ ವಿದ್ವಾನ್ ಕೆ.ವಿ. ಪ್ರಸಾದ್ ಅವರನ್ನು ಇದೇ ಸಂದರ್ಭದಲ್ಲಿ ಶ್ರೀಗಳು ಮತ್ತು ಸಚಿವರು ಸನ್ಮಾನಿಸಿದರು.
ಮೈಸೂರು, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಿಂದ ಆಗಮಿಸಿದ್ದ ವಿದ್ವಾಂಸರು ಮತ್ತು ಅವರ ಶಿಷ್ಯ ವೃಂದ ಸೂಕ್ತ ಪಕ್ಕವಾದ್ಯಗಳೊಂದಿಗೆ ಕಲಾಸಕ್ತರಿಗೆ ಸಂಗೀತದ ರಸದೌತಣ ಉಣಬಡಿಸಿತು. ಸಂಜೆ ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಸಾರಥ್ಯದಲ್ಲಿ ಸಂಪನ್ನಗೊಂಡ ಗೋಷ್ಠಿ ಗಾಯನ ಶ್ರೋತೃಗಳನ್ನು ಮುದಗೊಳಿಸಿತು. ಸಂಗೀತ ತ್ರಿಮೂರ್ತಿಗಳನ್ನು ಕುರಿತು ರಮ್ಯಭೂಮಿ ನುಡಿ ನಮನ ಸಲ್ಲಿಸಿದರು.
ಸಭಾದ ಕಾರ್ಯದರ್ಶಿ ಸಿ.ಆರ್. ಹಿಮಾಂಶು, ಸಂಯೋಜನಾಧಿಕಾರಿ ಪ್ರೊ. ಬಿ. ತಿಪ್ಪೇಸ್ವಾಮಿ, ಬಿ.ಸಿ. ರಾಜಗೋಪಾಲ್, ಚನ್ನಬಸಪ್ಪ ಮತ್ತು ಶ್ರೀಮಠದ ಪ್ರೊ. ಶಿವಕುಮಾರಸ್ವಾಮಿ ಮತ್ತು ಉದಯಶಂಕರ್ ಇದ್ದರು.