ನಗರಕ್ಕೆ ಪ್ರತಿದಿನ ನೀರು ಪೂರೈಕೆ ಏಕಿಲ್ಲ: ಮೈಗ್ರಾಪ
ಕ.ಪ್ರ.ವಾರ್ತೆ , ಮೈಸೂರು , ಜು. 1
ನಗರದಲ್ಲಿ ದಿನಂಪ್ರತಿ ನೀರಿನ ಸರಬರಾಜು ಏಕೆ ಮಾಡುತ್ತಿಲ್ಲ ಎಂದು ಮೈಸೂರು ಗ್ರಾಹಕರ ಪರಿಷತ್‌ನ ಡಾ. ಭಾಮಿ ವಿ. ಶೆಣೈ ಪ್ರಶ್ನಿಸಿದ್ದಾರೆ.
ಕೃಷ್ಣರಾಜ ಸಾಗರದ ನೀರಿನ ಮಟ್ಟು 90 ಅಡಿ ದಾಟಿದೆ ಮತ್ತು ಎಲ್ಲಾ ನೀರಿನ ಸಂಸ್ಕರಣಾ ಘಟಕಗಳು ಮಾಮೂಲು ಮಟ್ಟದ ನೀರನ್ನು ಪಡೆಯುತ್ತಿದೆ. ಆದರೂ, ನೀರಿನ ಮಟ್ಟ ಬಹಳ ಕಡಿಮೆಯಾಗಿದ್ದಾಗ ಎರಡರಿಂದ ಮೂರು ದಿನಕ್ಕೊಮ್ಮೆ ಮಿತಿಗೊಂಡಿದ್ದ ನೀರಿನ ಸರಬರಾಜು ದಿನಂಪ್ರತಿಗೆ ಮರುಕಳಿಸಿಲ್ಲ ಎಂದು ದೂರಿದ್ದಾರೆ.
ನೀರಿನ ಮಟ್ಟ ಕಡಿಮೆಯಾದಾಗ ನೀರಿನ ನೀರಿನ ಸರಬರಾಜನ್ನು ಮಿತಿಗೊಳಿಸಲು ಸ್ಥಳೀಯ ಅಧಿಕಾರಿಗಳು ತಕ್ಷಣ ತೀರ್ಮಾನಿಸಿದರು. ಈಗ ಕೃಷ್ಣರಾಜಸಾಗರದಲ್ಲಿ ನೀರಿನ ಮಟ್ಟ ಮಾಮೂಲು ಸ್ಥಿತಿಗೆ ಬರುತ್ತಿರುವಾಗ ನೀರಿನ ಸರಬರಾಜನ್ನು ಮಾಮೂಲು ಮಾಡಲು ಅವರು ಏಕೆ ಕಾಯುತ್ತಿದ್ದಾರೆ ಎಂದು ಕೇಳಿದ್ದಾರೆ.
ಎರಡು- ಮೂರು ದಿನಕ್ಕೊಮ್ಮೆ ಆಗುತ್ತಿರುವ ನೀರು ಸರಬರಾಜಿಗೆ ಜನ ಹೊಂದಿಕೊಂಡಿರಬೇಕು. ಏಕೆಂದರೆ, ಕಡಿಮೆ ನೀರು ಸರಬರಾಜಿನ ವಿರುದ್ಧ ಯಾರೂ ಗಲಾಟೆ ಮಾಡುತ್ತಿಲ್ಲ. ನಾಗರಿಕರಾಗಿ ನಮ್ಮ ಕರ್ತವ್ಯ ಮಾಡದಿರುವ ಹೊಣೆಗಾರಿಕೆ ನಮ್ಮ ಮೇಲೆಯೆ ಇದೆ. ಶಾಸಕರು ಮತ್ತು ಪಾಲಿಕೆ ಸದಸ್ಯರನ್ನು ಸಂಪರ್ಕಿಸಿ ನಗರಪಾಲಿಕೆ ಮತ್ತು ನೀರಿನ ಇಲಾಖೆಯ ಮೇಲೆ ಒತ್ತಡ ತಂದು ನೀರು ಪ್ರತಿದಿನ ಸರಬರಾಜಾಗುವಂತೆ ಮಾಡಬೇಕು ಎಂದು ಕರೆ ನೀಡಿದ್ದಾರೆ.