ಬೇಡಿಕೆ ಈಡೇರಿಕೆಗಾಗಿ ಸಿಪಿಐ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಜು. 1
ರಾಜ್ಯ ಸರ್ಕಾರವು ಜುಲೈನಲ್ಲಿ ಹೊಸ ಬಜೆಟ್ ಅಧಿವೇಶನ ನಡೆಸುತ್ತಿದ್ದು, ಜನತೆಯ ಪ್ರಮುಖ ಬೇಡಿಕೆಗಳನ್ನು ಜಾರಿಗೊಳಿಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಇದೇ ವೇಳೆ ಬಜೆಟ್ ಪೂರ್ವ ಜನಾಗ್ರಹ ಚಳವಳಿ ಬೇಡಿಕೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಯವರ ಮೂಲಕ ತಲುಪಿಸುವುದಾಗಿ ಹೇಳಿದರು.
ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಿ ಈ ಭೂಮಿಯನ್ನು ಭೂರಹಿತ ಕೃಷಿ ಕಾರ್ಮಿಕರಿಗೆ ನೀಡಬೇಕು. ನಗರ ಮತ್ತು ಗ್ರಾಮೀಣ ಭಾಗದ ನಿವೇಶನರಹಿತರಿಗೆ ನಿವೇಶನ ನೀಡಲು ಭೂಮಿ ಒದಗಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಬಜೆಟ್‌ನಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಇತರೆ ಉದ್ದೇಶಕ್ಕೆ ವೆಚ್ಚ ಮಾಡದಂತೆ ನಿರ್ಬಂಧಿಸಲು ಆಂಧ್ರಪ್ರದೇಶ ಮಾದರಿಯಲ್ಲಿ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಮಾಸಿಕ 3000 ಪಿಂಚಣಿ ನೀಡಬೇಕು. ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಉಂಟಾದ ನಷ್ಟವನ್ನು ಸಂಬಂಧಪಟ್ಟ ಗಣಿ ಕಂಪನಿಗಳು ಮತ್ತು ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಶುದ್ಧ ಕುಡಿಯುವ ನೀರು ಯೋಜನೆ ರಾಜ್ಯದ ಎಲ್ಲೆಡೆ ಜಾರಿಗೊಳಿಸಬೇಕು. ಎಪಿಎಲ್ ಚೀಟಿ ಹೊಂದಿರುವವರಿಗೆ ಅಕ್ಕಿ, ಗೋದಿ, ಸಕ್ಕರೆಯನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ, ಮುಖಂಡ ರಾಜು ನೇತೃತ್ವ ವಹಿಸಿದ್ದರು.