ರೈತ ಸಂಪರ್ಕ ಕೇಂದ್ರ; 38 ಲಕ್ಷ ಬಿಡುಗಡೆ
ಗುಂಡ್ಲುಪೇಟೆ: ತಾಲೂಕಿನ ಹೋಬಳಿ ಕೇಂದ್ರವಾದ ಬೇಗೂರಿನಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ 38 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ತಿಳಿಸಿದರು.
ಸೋಮವಾರ ಬೆಳಗ್ಗೆ ಇಲ್ಲಿನ ರೈತ ಸಂಪರ್ಕ ಇಲಾಖೆಗೆ ಭೇಟಿ ನೀಡಿದ್ದ ಸಮಯದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯು ಈ ಸಾಲಿನಲ್ಲಿ ನೂತನ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿದೆ ಎಂದರು.
ಬೇಗೂರಿನ ಉಪ್ಪಾರ ಸಮುದಾಯ ಭವನದ ಹಿಂದೆ ಇಲ್ಲಿನ ಗ್ರಾಪಂ ನೀಡಿರುವ ಜಾಗ ಪರಿಶೀಲಿಸಿದ ಅವರು, ಭೂಸೇನಾ ನಿಗಮಕ್ಕೆ ಕಟ್ಟಡದ ಉಸ್ತುವಾರಿ ವಹಿಸಲಾಗಿದೆ. ಬೇಗೂರಿನ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಇಂದು ಗ್ರಾಪಂ ಗುರುತಿಸಿರುವ ಜಾಗದ ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿದ್ದೇನೆ ಎಂದ ಅವರು, ಜಾಗ ಇಲಾಖೆಗೆ ವರ್ಗಾವಣೆಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರಿಂದ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.
ಗ್ರಾಮದಲ್ಲಿದ್ದ ರೈತ ಸಂಪರ್ಕ ಕೇಂದ್ರ ಶಿಥಿಲವಾಗಿರುವುದರಿಂದ ಈಗ ಖಾಸಗಿ ಕಟ್ಟಡದಲ್ಲಿ ರೈತ ಸಂಪರ್ಕ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.