ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಣ್ಣ ಕೈಗಾರಿಕೆಗೆ ರಹದಾರಿ ವಿನಾಯ್ತಿ ನೀಡಿ

Vishwanath S
Updated On : 2 Jul 2013, 12:49 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 1
ಸಣ್ಣ ಕೈಗಾರಿಕೆ ನಡೆಸಲು ಪಾಲಿಕೆ ನೀಡುವ ರಹದಾರಿ ವ್ಯವಸ್ಥೆ ರದ್ದುಗೊಳಿಸಿ, ತೆರಿಗೆಯಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ.ಪಿ. ಶಶಿಧರ್ ಒತ್ತಾಯಿಸಿದರು.
ಮೈಸೂರು ಕೈಗಾರಿಕೆಗಳ ಸಂಘ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಕೆಆರ್‌ಎಸ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ರಫ್ತು ವಿಮಾ ಸೌಲಭ್ಯ ಹಾಗೂ ರಫ್ತು ಉದ್ಯಮ ಅಭಿವೃದ್ಧಿ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಣ್ಣ ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿ, ಇನ್ನಿತರ ಇಲಾಖೆಗೆ ಸೇರಿದಂತೆ ಅಗತ್ಯವಿರುವ ರಹದಾರಿ ಪಡೆಯಬೇಕಾಗಿರುತ್ತದೆ. ಈ ನಡುವೆ ಪಾಲಿಕೆಯಿಂದ ಉದ್ಯಮ ರಹದಾರಿ ಪಡೆಯಬೇಕೆಂಬ ನೀತಿಯು ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದೆ. ಅಲ್ಲದೆ, ಪರವಾನಗಿ ಪಡೆಯಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಉದ್ಯಮ ಪರವಾನಗಿ ನೀಡುವ ವ್ಯವಸ್ಥೆಯಿಂದ ಸರ್ಕಾರಕ್ಕೆ ಬರುವ ಆದಾಯದ ಜತೆಗೆ ನಷ್ಟದ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ಹೇಳಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಣ್ಣ ಉದ್ದಿಮೆಗಳಿಗೆ ತೆರಿಗೆ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಏಕರೂಪದ ಆಸ್ತಿ ತೆರಿಗೆ ಪದ್ಧತಿ ಜಾರಿ ಮಾಡಬೇಕಿದೆ. ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಪ್ರತ್ಯೇಕ ಅನುದಾನ ನೀಡಬೇಕಿದೆ. ಮೂಲ ಸೌಕರ್ಯ ಕಲ್ಪಿಸಿ ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ಮುಂದು: ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ತೈಲ ಉತ್ಪನ್ನಗಳು ಹಾಗೂ ಚಿನ್ನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿರುವುದರಿಂದ ಆರ್ಥಿಕ ಬಿಕ್ಕಟ್ಟು ಏರ್ಪಟ್ಟಿದೆ. ಈ ಎರಡನ್ನು ನಿಯಂತ್ರಿಸಿದರೆ ಸುಸ್ಥಿರ ಆರ್ಥಿಕ ವರ್ಷವನ್ನು ನಾವು ಕಾಣಬಹುದು.
1990ರಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳಿಂದ 300ಕ್ಕೂ ಹೆಚ್ಚು ಉತ್ಪನ್ನಗಳು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ, ಈಗ ಇದರ ಪ್ರಮಾಣ ನಾಲ್ಕು ಸಾವಿರಕ್ಕೂ ಹೆಚ್ಚಿದೆ. ಈ ಮೂಲಕ ಕರ್ನಾಟಕ ಮುಂದಿದೆ. ಎಲೆಕ್ಟ್ರಾನಿಕ್ಸ್, ಐಟಿ, ಟೆಕ್ಸ್‌ಟೈಲ್ಸ್, ಗಾರ್ಮೆಂಟ್ಸ್ ಸೇರಿದಂತೆ ಇನ್ನಿತರ ವಸ್ತುಗಳ ರಫ್ತು ಆಶಾದಾಯಕವಾಗಿದೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕ ವಾಸು, ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಷರೀಫ್, ಇಸಿಜಿಸಿ ದಕ್ಷಿಣ ಪ್ರಾಂತದ ಉಪ ಪ್ರಧಾನ ವ್ಯವಸ್ಥಾಪಕ ನಿರ್‌ದೋಶ್ ಚೋಪ್ರ, ಮೈಸೂರು ಕೈಗಾರಿಕೆಗಳು ಸಂಘದ ಅಧ್ಯಕ್ಷ ಪಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement