ಸುತ್ತೂರಲ್ಲಿ ಸುನಾದ ಲೋಕ ಸೃಷ್ಟಿ!
ಕ.ಪ್ರ.ವಾರ್ತೆ , ನಂಜನಗೂಡು , ಜು. 1
ಎಂದರೋ... ಮಹಾನುಭಾವುಲು... ಎಂದು ನೂರಕ್ಕೂ ಹೆಚ್ಚು ಮಂದಿ ಸಂಗೀತ ಕಲಾವಿದರು ತಾಳಬದ್ಧವಾಗಿ ಸುಸ್ವರದೊಂದಿಗೆ ಹಾಡುತ್ತಿದ್ದರೆ ಸುತ್ತೂರಿನ ಪ್ರಶಾಂತ ವಾತಾವರಣದಲ್ಲಿ ನಾದಲೋಕವೆ ಸೃಷ್ಟಿಯಾಗಿತ್ತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹಾರೆನಿಸಿದ ತ್ಯಾಗರಾಜರು, ಶ್ಯಾಮಾಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದಿಕ್ಷೀತರ ಆರಾಧನಾ ಮಹೋತ್ಸವದ ಅಂಗವಾಗಿ ತಾಲೂಕಿನ ಸುತ್ತೂರಿನಲ್ಲಿ ಭಾನುವಾರ ಸಂಗೀತ ಸುಧೆ ಹರಿದು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು. ಉತ್ತಮ ಗಾಯಕರು ಮತ್ತು ನುರಿತ ಪಕ್ಕವಾದ್ಯ ಕಲಾವಿದರು ಶ್ರದ್ಧೆಯಿಂದ ತ್ರಿಮೂರ್ತಿಗಳು ರಚಿಸಿದ ಉತ್ತಮ ಕೃತಿಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು.
ಶಂಕರಾಭರಣ ರಾಗದೊಂದಿಗೆ ತ್ರಿಪುಟ ತಾಳದಲ್ಲಿ ಮೂಡಿ ಬಂದ ತ್ಯಾಗರಾಜರ ಮನಸೋ ಸ್ವಾಧೀನಮೈನ... ಕೃತಿ ಮೈಸೂರಿನ ವಿ.ಎಂ. ರಾಘವೇಂದ್ರ ಅವರ ಸುಮಧುರ ಕಂಠದೊಂದಿಗೆ ಸಂಗೀತೋತ್ಸವ ಚಾಲನೆ ಪಡೆಯಿತು. ನಂತರ ಕಛೇರಿ ನೀಡಿದ ಪ್ರತಿಯೊಬ್ಬ ಗಾಯಕರೂ ಉತ್ತಮ ಕೃತಿಗಳನ್ನೆ ಆಯ್ದುಕೊಂಡು ಸಂಗೀತ ಪ್ರಿಯರನ್ನು ಸಂತೃಪ್ತಿಗೊಳಿಸಿದರು.
ವಿ. ಪಟ್ಟಾಭಿರಾಮ ಪಂಡಿತ್ ಅವರು ತಮ್ಮ ಮನೋಜ್ಞ ಗಾಯನದಲ್ಲಿ ತ್ಯಾಗರಾಜರ ತೆಲಿಸಿ ರಾಮಚಂದ್ರ... ಕೀರ್ತನೆಯನ್ನು
ಪೂರ್ಣಚಂದ್ರಿಕೆ ರಾಗ, ಆದಿತಾಳದಲ್ಲಿ ಹಾಡಿ ಕಛೇರಿಗೆ ಕಳೆ ತಂದರು. ಇನ್ನು ಮೈಸೂರಿನ ಎಂ. ನಟರಾಜ್ ಮತ್ತು ಡಾ. ಎಂ. ಮಂಜುನಾಥ್ ಅವರ ದ್ವಂದ್ವ ವಯೊಲಿನ್ ವಾದನ ನಿರೀಕ್ಷೆಯಂತೆ ಅದ್ಭುತವಾಗಿ ಮೂಡಿಬಂತು. ಮೋಹನರಾಗ ಆದಿತಾಳದಲ್ಲಿ ಪ್ರಸ್ತುತಗೊಂಡ ತ್ಯಾಗರಾಜರ ನನೂ ಪಾಲಿಂಪಾ...ಮುತ್ತುಸ್ವಾಮಿ ದೀಕ್ಷಿತರ ಅನ್ನಪೂರ್ಣೆ ವಿಶಾಲಾಕ್ಷಿ... ಕೀರ್ತನೆ ಕಲಾ ರಸಿಕರನ್ನು ತನ್ಮಯರನ್ನಾಗಿಸಿತು.
ಇವರಲ್ಲದೆ ವಿದ್ವಾಂಸರಾದ ವಿ. ರಾಮಕೃಷ್ಣ, ವಿ.ಎಂ.ಎಸ್. ಶೀಲಾ, ವಿ.ಎನ್. ಶ್ರೀನಾಥ್, ವಿ. ಐಶ್ವರ್ಯ ವಿದ್ಯಾರಘುನಾಥ್ ಅವರ ಗಾಯನ ಮತ್ತು ವಿ.ಕೆ.ಪಿ. ಉಪಾಧ್ಯಾಯ ಅವರ ವೇಣು ವಾದನ ಸಭೆಯನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ವಿ. ಆರ್.ಕೆ. ಪದ್ಮನಾಭ ಮತ್ತು ಅವರ ನೂರಾರು ಶಿಷ್ಯರು ಉಳಿದ ಕಲಾವಿದರುಗಳೊಂದಿಗೆ ಗೋಷ್ಠಿಗಾನ ನಡೆಸಿಕೊಟ್ಟರು.
ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಮೂರನೆಯದಾದ ಸಾದಿಂಚನೆ ಮನಸಾ...ಕೃತಿ ಆರಭಿ ರಾಗದೊಂದಿಗೆ ಆದಿತಾಳದಲ್ಲಿ ಹೊರಹೊಮ್ಮಿ ಸಭಿಕರು ನಾದಗಂಗೆಯಲ್ಲಿ ಮೀಯುವಂತೆ ಮಾಡಿತು. ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಐದನೆಯದಾದ ಎಂದರೋ ಮಹಾನುಭಾವುಲು... ಕೀರ್ತನೆ ಶ್ರೀ ರಾಗ, ಆದಿತಾಳದಲ್ಲಿ ಮೂಡಿ ಗೋಷ್ಠಿಗಾಯನ ಸಂಪನ್ನಗೊಂಡು ಸಂಗೀತೋತ್ಸವಕ್ಕೆ ಮಂಗಳ ಹಾಡಲಾಯಿತು. ಪಕ್ಕವಾದ್ಯದಲ್ಲಿ ವಿದ್ವಾಂಸರಾದ ಅಧಿತಿ, ಮಹತಿ, ಜ್ಯೋತಿ, ಅರ್ಜುನಕುಮಾರ್, ಬಿ.ಸಿ. ಮಂಜುನಾಥ್, ರಾಧೇಶ್, ನಟರಾಜ್ ಮತ್ತು ರವಿಶಂಕರ್ ಕಚೇರಿಗೆ ಉತ್ತಮ ಸಾಥ್ ನೀಡಿ ಸಭಿಕರ ಮೆಚ್ಚುಗೆ ಪಡೆದರು.