ಗ್ಯಾಂಗ್‌ವಾರ್ ಸೇಡು: ವ್ಯಕ್ತಿ ಬರ್ಬರ ಹತ್ಯೆ
ಕ.ಪ್ರ.ವಾರ್ತೆ , ಮೈಸೂರು , ಜು. 2
ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹದೇವಪುರ ರಸ್ತೆ ಅಜೀಜ್‌ಸೇಠ್‌ನಗರದ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಮಂಡಿ ಮೊಹಲ್ಲಾ ನಿವಾಸಿ ಸೈಯದ್ ಮೊಹದ್ದೀನ್ ಎಂಬವರ ಪುತ್ರ ಸೈಯದ್ ಕಬೀರ್ (36) ಕೊಲೆಯಾದವನು. ಈತನು ಗುಂಪೊಂದು ಕಟ್ಟಿಕೊಂಡು ಕೊಲೆ, ಕೊಲೆ ಯತ್ನ, ಪಿಕ್‌ಪಾಕೆಟ್ ಸೇರಿದಂತೆ ವಿವಿಧ ಅಪರಾಧ ಕೃತ್ಯ ಎಸಗುತ್ತಿದ್ದ. 2010ರಲ್ಲಿ ಮಂಡಿ ಮೊಹಲ್ಲಾ ನಿವಾಸಿ ಜಮೀಲ್ ಎಂಬಾತನನ್ನು ಕಬೀರ್ ಕೊಲೆ ಮಾಡಿದ್ದ.
ಈ ಸಂಬಂಧ ಜಮೀಲ್ ಕಡೆಯವರು ಕಬೀರ್ ಮೇಲೆ ಹಗೆ ಸಾಧಿಸುತ್ತಲೇ ಬಂದಿದ್ದು, ಒಂದು ಹಂತದಲ್ಲಿ ಕಬೀರ್‌ನನ್ನು ಮಂಡಿಯಿಂದ ಓಡಿಸಿದ್ದರು. ಅಲ್ಲಿಂದ ಹೊರ ಬಂದ ಕಬೀರ್ ಉದಯಗಿರಿ ಠಾಣೆ ಹಿಂಭಾಗದಲ್ಲಿರುವ ಕೆಎಸ್‌ಸಿಬಿ ಕಾಲೋನಿಯಲ್ಲಿ ವಾಸವಾಗಿದ್ದ.
ಸೋಮವಾರ ರಾತ್ರಿ ಕಬೀರ್ ಮಹದೇವಪುರ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಸ್ಯಾಂಟ್ರೋ ಕಾರು ಡಿಕ್ಕಿಯಾಯಿತು. ಕಾರಿನಿಂದ ಇಳಿದ 6- 7 ಮಂದಿ ಕೆಳಗೆ ಬಿದ್ದಿದ್ದ ಕಬೀರ್‌ನನ್ನು ಮನಬಂದಂತೆ ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಗುಂಪು ಸೇರುತ್ತಿದ್ದಂತೆ ಕೊಲೆಗಡುಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉದಯಗಿರಿ ಪೊಲೀಸರು ಕಬೀರ್‌ನನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಕಾರು ಪತ್ತೆ: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್ ಮತ್ತು ಸಿಬ್ಬಂದಿ, ವರ್ತುಲ ರಸ್ತೆಯಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆ ಹಿಂಭಾಗದಲ್ಲಿ ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು ಮತ್ತು ಮಾರಕಾಸ್ತ್ರಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
ಗ್ಯಾಂಗ್‌ವಾರ್: ಮಂಡಿ ಮೊಹಲ್ಲಾದ ಕೆಲವು ಯುವಕರು ಸೇರಿ ಎರಡು ಗ್ಯಾಂಗ್‌ಗಳನ್ನು ಕಟ್ಟಿಕೊಂಡಿದ್ದರು. ಈ ಗ್ಯಾಂಗ್‌ಗಳ ನಡುವೆ ಆಗಾಗ ಘರ್ಷಣೆ ನಡೆಯುತ್ತಿತ್ತು.
ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಪಿರಿಯಾಪಟ್ಟಣ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚದೇವನಹಳ್ಳಿ ಸಮೀಪದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಕೊಡಗು ಜಿಲ್ಲೆ ಕುಶಾಲನಗರ ನಿವಾಸಿ ಸಲೀಂ (23) ಮೃತಪಟ್ಟವರು. ಹಿಂಬದಿ ಸವಾರ ಗೌರವ್ ಎಂಬವರ ಸ್ಥಿತಿ ಚಿಂತಾಜನಕವಾಗಿದೆ. ಕುಶಾಲನಗರದಿಂದ ಪಿರಿಯಾಪಟ್ಟಣಕ್ಕೆ ಬೈಕ್‌ನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ. ಇಬ್ಬರನ್ನೂ ಸಮೀಪದ ಕುಶಾಲನಗರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಲೀಂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು, ಗೌರವ್‌ಗೆ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಲುಕುಪ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.