ನಂಜನಗೂಡಿನಲ್ಲಿ ಹಿರಿಯ ವೈದ್ಯರಿಗೆ ಸನ್ಮಾನ
ಕ.ಪ್ರ.ವಾರ್ತೆ , ನಂಜನಗೂಡು , ಜು. 2
ವೈದ್ಯರ ದಿನಾಚರಣೆ ಅಂಗವಾಗಿ ಸೋಮವಾರ ತಾಲೂಕು ಭಾರತೀಯ ವೈದ್ಯಕೀಯ ಸಂಘ ಹಾಗೂ ಔಷಧ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಸ್ಥಳೀಯ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.
ಹಿರಿಯ ವೈದ್ಯರಾದ ಡಾ.ಬಿ. ಶಿವರುದ್ರಪ್ಪ, ಡಾ.ಎಂ. ವೃಷಭೇಂದ್ರಸ್ವಾಮಿ, ಡಾ.ಜಿ.ಎಲ್. ವಿಠಲ್, ಡಾ.ಪಿ. ಸುಭದ್ರಮ್ಮ, ಡಾ.ಪಿ.ಡಿ ಏಕಾಂಬರಂ, ಡಾ. ಸುಭದ್ರಮ್ಮ ಶಿವಲಿಂಗಪ್ಪ ಹಾಗೂ ಡಾ.ಎಸ್. ಸುಂದರೇಶ್ ಸನ್ಮಾನಕ್ಕೆ ಪಾತ್ರರಾದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐಎಂಎ ಮಾಜಿ ಅಧ್ಯಕ್ಷ ಡಾ.ಎಸ್. ಸುಂದರೇಶ್, ಡಾ. ಗುರುರಾಜಾರಾವ್, ಡಾ. ಲಕ್ಷ್ಮಣರಾವ್, ಡಾ. ಚಂಗಲ್ವರಾಯ, ಡಾ. ನರಸಿಂಹಮೂರ್ತಿ, ಡಾ. ದೊರೆಸ್ವಾಮಿ, ಡಾ. ಸೋಮಶೇಖರ್ ಮುಂತಾದವರು ತಮ್ಮ ನಿಸ್ವಾರ್ಥ ಸೇವೆಯಿಂದಾಗಿ ನಂಜನಗೂಡಿನಲ್ಲಿ ವೈದ್ಯ ವೃತ್ತಿಗೆ ಘನತೆ ತಂದುಕೊಟ್ಟವರು. ಇಂತಹ ಹಿರಿಯ ಚೇತನಗಳ ಆದರ್ಶ ಮತ್ತು ಸೇವಾತತ್ಪರತೆ ಇಂದು ನಮ್ಮಗಳ ವೃತ್ತಿ ಜೀವನದ ದಾರಿದೀಪ ಎಂದರು. ವೃತ್ತಿ ಜೀವನದ ಯಶಸ್ಸಿಗೆ ನೆರವಾದ ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಪೊರೇಟ್ ಸಂಸ್ಕೃತಿ ಬೇಡ: ಮಕ್ಕಳ ತಜ್ಞ ಡಾ.ಆರ್.ಕೆ. ಪ್ರಸಾದ್ ಮಾತನಾಡಿ, ವೈದ್ಯ ವೃತ್ತಿಯಲ್ಲಿ ಕಾರ್ಪೊರೇಟ್ ಸಂಸ್ಕೃತಿಗೆ ಅವಕಾಶ ನೀಡಬಾರದು ಎಂದು ಸೂಚ್ಯವಾಗಿ ತಿಳಿಸಿದರು. ನಮ್ಮಗಳ ಸೇವೆಯನ್ನು ಐಎಂಎ ಗುರುತಿಸಿ ಸನ್ಮಾನಿಸುವುದಕ್ಕಿಂತ ಸಮಾಜ ಗುರುತಿಸಿ ಗೌರವಿಸಬೇಕಿತ್ತು ಎಂದು ಡಾ. ಶಿವರುದ್ರಪ್ಪ ಅಭಿಪ್ರಾಯಪಟ್ಟರು.
ಡಾ. ಕೆ.ಪಿ.ಎಸ್ .ವೈದ್ಯ ಮಾತನಾಡಿದರು. ತಾಲೂಕಿನ ಉತ್ತಮ ವೈದ್ಯಾಧಿಕಾರಿ ಎಂದು ಪುರಸ್ಕೃತರಾದ ಡಾ. ಧರ್ಮರಾಜ್ ಮತ್ತು ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿ ನಡೆಯಲಿರುವ ಟಿಎಸ್‌ಪಿಎಡಿ ತರಬೇತಿಗೆ ತೆರಳುತ್ತಿರುವ ಡಾ. ರಾಜೀವ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಡಾ. ಸಿ.ಎಸ್. ರವಿ, ಕಾರ್ಯದರ್ಶಿ ಡಾ.ಎಸ್. ಶ್ರೀಕಾಂತ್, ಖಜಾಂಚಿ ಡಾ.ಬಿ.ಜಿ. ಶೇಖರ್, ಡಾ. ಶೋಭ ಪ್ರಕಾಶ್, ಡಾ.ಎಸ್.ವಿ. ಭಾಸ್ಕರ್, ಔಷಧ ವ್ಯಾಪಾರಿ ಸಂಘದ ಪದಾಧಿಕಾರಿಗಳಾದ ಕೆ.ವಿ. ಸುರೇಂದ್ರ, ಶ್ರೀಕಂಠಪ್ರಸಾದ್, ರಾಮಚಂದ್ರ, ಕನಕರಾಜು, ಅರವಿಂದ್, ರವಿ, ಬಾಬುಲಾಲ್ ಇದ್ದರು.