ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭಾರತೀಯ ಭಾಷಾ ಸಂಸ್ಥಾನ ಕೋಟೆಯಾಚೆ ಬರಲಿ

Vishwanath S
Updated On : 3 Jul 2013, 12:22 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 2
ಭಾಷಾ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಪಡೆಯುತ್ತಿರುವ ಭಾರತೀಯ ಭಾಷಾ ಸಂಸ್ಥಾನವು ತನ್ನ ಕೋಟೆಯಿಂದ ಹೊರ ಬಂದು ಕೆಲಸ ಮಾಡಬೇಕು ಎಂದು ಸಾಹಿತಿ ಬಿ. ಶಾಮಸುಂದರ ಹೇಳಿದರು.
ತಾಲೂಕಿನ ಇಲವಾಲದ ಗ್ರಾಪಂ ಸಮುದಾಯ ಭವನ ಆವರಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾ ಮಂಟಪದಲ್ಲಿನ ನಂಜುಂಡ ಕವಿ ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ಭಾಷಾ ಸಂಸ್ಥಾನಕ್ಕೆ ಕನ್ನಡ ಭಾಷೆ ಸೇರಿದಂತೆ ಹಲವು ಭಾಷೆಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಗಟ್ಟಲೆ ಅನುದಾನ ನೀಡುತ್ತಿದೆ. ಆದರೆ ಕನ್ನಡದ ಅಭಿವೃದ್ಧಿಗೆ ಮೈಸೂರಿನ ಸಾಹಿತಿಗಳನ್ನು ಬಳಸುತ್ತಿಲ್ಲ. ಅಲ್ಲದೆ ತನ್ನ ಕೋಟೆಯೊಳಗೆ ಬಂಧಿಯಾಗಿದೆ. ಆದ್ದರಿಂದ ಕೋಟೆಯಿಂದ ಹೊರ ಬಂದು ಕೆಲಸ ಮಾಡಲಿ ಎಂದು ಅವರು ಕರೆ ನೀಡಿದರು.
ಒಂದು ವಿಶ್ವವಿದ್ಯಾನಿಲಯ ಹೊರತಂದ ಪುಸ್ತಕವನ್ನು ಬೇರೆ ವಿಶ್ವವಿದ್ಯಾನಿಲಯ ಪ್ರಕಟಿಸಬಾರದು. ಇತ್ತೀಚೆಗೆ ಹೆಚ್ಚುತ್ತಿರುವ ಕಳ್ಳ ಲೇಖಕರನ್ನು ಮಟ್ಟ ಹಾಕಬೇಕು. ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಆದ್ದರಿಂದ ಯುವಕರಲ್ಲಿ ಓದುವ ಹವ್ಯಾಸ ಬೆಳೆಯುವಂತೆ ಮಾಡಬೇಕು ಎಂದರು.
ಸರ್ಕಾರವೇ ಹೊಣೆ: ಕನ್ನಡ ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗುತ್ತಿದೆ. ಇದ್ದ ಕೆಲವೆ ಕೆಲವು ವಿದ್ಯಾರ್ಥಿಗಳನ್ನು ಅಕ್ಕಪಕ್ಕದ ಶಾಲೆಗೆ ಕಳುಹಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಮೊದಲ ಹೊಣೆ, ಗ್ರಾಮಸ್ಥರು ಎರಡನೆಯವರು. ವಿಶಾಲ ಜಾಗವುಳ್ಳ ಆಕರ್ಷಕ ಕಟ್ಟಡ ಇಲ್ಲದಿರುವುದು, ಕುಡಿಯಲು ಶುದ್ಧ ನೀರಿನ ಕೊರತೆ, ಆಟದ ಮೈದಾನದ ಕೊರತೆ, ಶೌಚಾಲಯದ ಅವ್ಯವಸ್ಥೆ, ಹತ್ತು ಹಲವು ಕೊರತೆ ಇರುವ ಶಾಲೆಗೆ ಯಾವ ಪೋಷಕರು ತಾನೆ ತಮ್ಮ ಮಕ್ಕಳನ್ನು ಸೇರುಸುತ್ತಾರೆ ಎಂದು ಅವರು ಪ್ರಶ್ನಿಸಿದರು.
ಒಂದು ಭಾಷೆಯ ಶಕ್ತಿ ಪ್ರಕಟವಾಗುವುದು ಅದನ್ನು ಬಳಸುವ ಮಂದಿಯಿಂದ. ಅವರ ಜೀವನ ಸಂಸ್ಕೃತಿ ಬೆಳಕಿಗೆ ಬರುವುದು ಅವರ ನುಡಿಯಿಂದ. ನುಡಿ ನಾಡನ್ನು ಕಟ್ಟುತ್ತದೆ. ನುಡಿ ನಾಡನ್ನು ಬೆಳೆಸುತ್ತದೆ. ನಮ್ಮ ನಡೆ, ನುಡಿ ಸಂಸ್ಕೃತಿಯನ್ನು ರಕ್ಷಿಸುತ್ತದೆ. ಒಟ್ಟಿನಲ್ಲಿ ನಮ್ಮ ತಾಯಿ ನುಡಿಯೆ ನಮ್ಮೆಲ್ಲರ ಪ್ರಾಣವಿದ್ದಂತೆ. ಮಾನವ ದೇಹಕ್ಕೆ ರೋಗ ರುಜಿನಗಳ ಕಾಟವಿದ್ದಂತೆ ನಾಡಿಗೆ ನಾಡಿನ ನುಡಿಗೆ ಶತ್ರುಗಳ ಕಾಟವಿರುತ್ತದೆ. ಕನ್ನಡಿಗರು ಇದರ ಬಗ್ಗೆ ಎಚ್ಚರವಿದ್ದು, ಭಾಷಾ ಕಂಟಕದಿಂದ ಕನ್ನಡವನ್ನು ರಕ್ಷಿಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.
ಕನ್ನಡಿಗರ ನುಡಿ ಚೆಂದ, ನಡೆ ಅಂದ. ಇವರು ಯಾರಿಗೂ ಕೇಡನ್ನು ಬಯಸದ ಜನ. ಇವರ ಒಳ್ಳೆಯತನವನ್ನು ಕೆಲವರು ಅಪಾರ್ಥ ಮಾಡಿಕೊಳ್ಳಬಹುದು. ಇದಕ್ಕೆ ನಾವು ಅವಕಾಶ ಕೊಡಬಾರದು ಎಂದರು.
ಇಂದಿನ ಈ ಸಮ್ಮೇಳನ ಕನ್ನಡ ಸಾಹಿತ್ಯವನ್ನು ಕುರಿತು ಚಿಂತಿಸುವ, ಚರ್ಚಿಸುವ ವೇದಿಕೆಯಾಗಿ ಉಳಿದಿಲ್ಲ. ಕನ್ನಡ ಸಾಹಿತ್ಯದ ಜೊತೆಗೆ ಅದಕ್ಕೆ ನೆಲೆ ನೀಡಿರುವ ನಾಡಿನ, ಅಲ್ಲಿನ ಜನರ ಹಿತಚಿಂತನೆಯ ಅಭಿವೃದ್ಧಿಯ ಮಾರ್ಗದ ಚಿಂತನೆ ಮಾಡುವ, ಹೊಸ ಮಾರ್ಗಗಳನ್ನು ಹುಡುಕುವ ವೇದಿಕೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಅದು ಹೆಚ್ಚಾಗಬೇಕು ಎಂದು ಅವರು ಆಶಿಸಿದರು. ಕನ್ನಡ ಶಾಸ್ತ್ರೀಯ ಭಾಷೆಯಾಗಿ ಪರಿಗಣಿತವಾದ ಹಿನ್ನೆಲೆಯಲ್ಲಿ ಈಗ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯವನ್ನೂ ಕನ್ನಡದಲ್ಲಿ ಕಲಿಸಬಹುದು ಎಂದರು. ಉತ್ತರಾಖಂಡಕ್ಕೆ ಹೋಗಿ ಸಾಯುವ ಬದಲು ತಂದೆ, ತಾಯಿ ದೇವರು, ಅಕ್ಕಪಕ್ಕದ ಹಿರಿಯರನ್ನು ಗೌರವಿಸಿ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುವೆಂಪು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎ. ರಂಗಸ್ವಾಮಿ ಮಾತನಾಡಿ, ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು. ಆಗ ಮಾತ್ರ ಕನ್ನಡದ ಕೆಲಸ ಸಾಧ್ಯ ಈ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement