ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾದಕ ವ್ಯಸನದಿಂದ ನರಮಂಡಲಕ್ಕೆ ನೇರ ಹಾನಿ: ಎಸ್.ಟಿ. ಚಂದ್ರಶೇಖರ್

Vishwanath S
Updated On : 3 Jul 2013, 12:21 pm

ಕ.ಪ್ರ.ವಾರ್ತೆ ,  ಹುಣಸೂರು ,  ಜು. 2
ಮಾದಕ ವಸ್ತುಗಳ ಸತತ ಸೇವನೆಯು ಮನುಷ್ಯನ ಕೇಂದ್ರಿಯ ನರಮಂಡಲದ ಮೇಲೆ ನೇರ ಪರಿಣಾಮ ಉಂಟು ಮಾಡುವುದರಿಂದ, ಇಂತಹ ಕೆಟ್ಟ ಚಟಗಳಿಂದ ವಿದ್ಯಾರ್ಥಿಗಳು ಹಾಗೂ ಯುವಜನಾಂಗ ದೂರವಿರಬೇಕೆಂದು ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಟಿ. ಚಂದ್ರಶೇಖರ್ ಹೇಳಿದರು.
ಮಾದಕ ದ್ರವ್ಯ ಸೇವನೆ ವಿರೋಧಿ ದಿನಾಚರಣೆಯ ಅಂಗವಾಗಿ ಅಬಕಾರಿ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಹುಣಸೂರು ಉಪವಿಭಾಗ ಮಟ್ಟದ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀವು ಹುಟ್ಟಿದ ನೆಲದಲ್ಲಿ ಭದ್ರವಾಗಿ ನೆಲೆಯೂರಬೇಕಾದ ಇಂತಹ ಸಂದರ್ಭದಲ್ಲಿ, ಇಂತಹ ಕೆಟ್ಟ ಚಟಗಳಿಗೆ ಸಿಲುಕಿದಲ್ಲಿ ಜೀವನವೆ ಹಾಳಾಗುತ್ತದೆ.
ಮಾದಕ ವಸ್ತುಗಳು ದೇಹಕ್ಕೆ ಹಾನಿಕಾರಕವೆಂದರೂ ಸರ್ಕಾರ ಅನುಮತಿ ನೀಡಿರುವುದಾದರೂ ಏಕೆ ಎಂದು ನಿಮ್ಮ ಮನದಲ್ಲಿ ಪ್ರಶ್ನೆ ಏಳಬಹುದು. ಆದರೆ ಪ್ರತಿಯೊಂದು ವಸ್ತುವಿನಿಂದಲೂ ಮನುಷ್ಯನಿಗೆ ಹಾಗೂ ಸಮಾಜಕ್ಕೆ ಉಪಯೋಗವಾಗುವಂತಹ ಗುಣಗಳಿರುತ್ತವೆ. ಅವುಗಳ ಉಪಯೋಗವನ್ನು ಹಿತಮಿತವಾಗಿ ಮಾಡಿದಲ್ಲಿ ಮಾತ್ರ ಸಮಾಜಕ್ಕೂ ಹಾಗೂ ದೇಹಕ್ಕೂ ಆರೋಗ್ಯಕರವಾಗುತ್ತದೆ ಎಂದು ಅವರು ತಿಳಿಸಿದರು.
ತಾಲೂಕು ಅಬಕಾರಿ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ, ಮೊದಲು ಮೋಜಿಗಾಗಿ ಪ್ರಾರಂಭವಾಗುವ ಮಾದಕ ಸೇವನೆಯು ನಂತರ ಚಟವಾಗಿ ಪರಿಣಮಿಸಿ ಜೀವನವನ್ನೆ ಹಾಳು ಮಾಡುತ್ತದೆ.
ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಇಂತಹ ಚಟಕ್ಕೆ ಬಲಿಯಾಗಬಾರದು. ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಸಮಸ್ಯೆಯ ಗಂಭೀರತೆಯನ್ನು ಅರಿತು ಇತರರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.
ಪ್ರಾಂಶುಪಾಲ ಆನಂದ್‌ರಾಜ್ ಮಾತನಾಡಿದರು. ಎಸ್‌ಐ ಹರಿವರ್ಧನ್, ಮುಖ್ಯ ಪೇದೆ ಲಕ್ಷ್ಮೀನಾರಾಯಣ, ಉಪನ್ಯಾಸಕರಾದ ಆರ್. ಆನಂದ್, ಶಾಂತಕುಮಾರ್, ಎನ್. ಆನಂದ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement