'ರಾಮ'ಕೃಷ್ಣ ಗ್ರಂಥಾಲಯ ವನವಾಸಕ್ಕೆ ಮುಕ್ತಿ
ಕ.ಪ್ರ.ವಾರ್ತೆ , ಮೈಸೂರು , ಜು. 2
ರಾಮಕೃಷ್ಣನಗರ ಶಾಖಾ ಗ್ರಂಥಾಲಯ ಉದ್ಘಾಟನೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ.
ಮಹಾನಗರ ಪಾಲಿಕೆಯಿಂದ ನಿರ್ಮಿಸಿದ್ದ ಈ ಕಟ್ಟಡ ಅನೇಕ ದಿನಗಳಿಂದ ಉದ್ಘಾಟನೆಗೊಂಡಿರಲಿಲ್ಲ. ಅಗತ್ಯ ಪೀಠೋಪಕರಣ ಮತ್ತು ಪುಸ್ತಕಗಳನ್ನು ಮಾತ್ರ ಸ್ಥಳಾಂತರಗೊಳಿಸಲಾಗಿತ್ತು. ಈ ಬಗ್ಗೆ ಜೂ. 24 ರಂದು ಕನ್ನಡಪ್ರಭದ ಗ್ರಂಥಾಲಯ ಗೋಳು ಸುದ್ದಿ ಸರಣಿಯ ಭಾಗ- 21 ರಲ್ಲಿ ರಾಮಕೃಷ್ಣನಗರ ಗ್ರಂಥಾಲಯ ಕಟ್ಟಡ ನಿರ್ಮಾಣವಾದರೂ ಆಗದ ಉದ್ಘಾಟನೆ ಎಂಬ ಹೆಸರಿನಲ್ಲಿ ವರದಿ ಪ್ರಕಟಗೊಂಡಿತ್ತು.
ಇದರ ಫಲವಾಗಿ ಈಗ ಗ್ರಂಥಾಲಯ ಉದ್ಘಾಟನೆಗೆ ಸಿದ್ಧವಾಗಿದೆ. ಜು. 4ರ ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಟ್ಟಡ ಉದ್ಘಾಟಿಸುವರು. ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಜಿಪಂ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ, ಸಂಸದರಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.