ಹೆಚ್ಚು ಜೈವಿಕ ಉದ್ಯಾನವನ ನಿರ್ಮಾಣ ಅಗತ್ಯ: ಎಲ್ಲಪ್ಪರೆಡ್ಡಿ
ಕ.ಪ್ರ.ವಾರ್ತೆ , ಮೈಸೂರು , ಜು. 2
ಪ್ರತಿ 40 ಕಿ.ಮೀ. ವ್ಯಾಪ್ತಿಯಲ್ಲಿ ಜೈವಿಕ ಉದ್ಯಾನವನ ನಿರ್ಮಿಸಬೇಕಾದ ಅಗತ್ಯವಿದೆ ಎಂದು ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಎನ್. ಎಲ್ಲಪ್ಪ ರೆಡ್ಡಿ ತಿಳಿಸಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ನಡೆದ ಜಲ ಅರಣ್ಯದ ಒಂದು ಉತ್ಪನ್ನ ವಿಷಯದ ಬಗ್ಗೆ ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚಿತ್ರದುರ್ಗದಲ್ಲಿನ ಜೈವಿಕ ಉದ್ಯಾನವನ ಉತ್ತಮವಾಗಿದೆ. ಆದರೆ ರಾಮನಗರ ಸೇರಿದಂತೆ ಇತರೆಡೆಯಲ್ಲಿನ ಜೈವಿಕ ಉದ್ಯಾನವನಗಳು ಸೊರಗುತ್ತಿವೆ. ಜೈವಿಕ ಉದ್ಯಾನವನಗಳಿಂದ ನಮ್ಮ ಮುಂದಿನ ಪೀಳಿಗೆಗೆ ನೀರಿನ ಉಗಮ ಮತ್ತು ಅದರ ಪುನರ್ ಬಳಕೆ ಕುರಿತು ಮಾಹಿತಿ ತಿಳಿಯುತ್ತದೆ. ಆದ್ದರಿಂದ ಪ್ರತಿ 40 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಜೈವಿಕ ಉದ್ಯಾನವನ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿಶ್ವದ ಶೇ. 62 ರಷ್ಟು ಮಂದಿ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಅಲ್ಲದೆ ಗಣಿಗಾರಿಕೆಯು ನೀರಿನ ಮೇಲೆ ಪರಿಣಾಮ ಬೀರುತ್ತಿದೆ. ರಾಸಾಯನಿಕ ಬಳಕೆ, ಶೌಚಾ ಗುಂಡಿಗಳು ಮತ್ತು ಸಂಸ್ಕರಿಸದ ನೀರಿನಿಂದಲೂ ಪರಿಣಾಮ ಹೆಚ್ಚಾಗಿದೆ ಎಂದು ಹೇಳಿದರು.
ಶೇ. 1 ರಷ್ಟು ನೀರನ್ನು ಮಾತ್ರ ಪುನರ್ ಬಳಕೆ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ, ರಸ್ತೆ ವಿಸ್ತರಣೆ ಹೆಸರಿನಲ್ಲಿ ಮರ ಕಡಿಯಲಾಗುತ್ತಿದೆ. ಮರ ಕಡಿಯುವುದನ್ನು ಬಿಟ್ಟು ನಾವು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಇದ್ದರು.