195 ಮಂದಿ ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ
ಕ.ಪ್ರ.ವಾರ್ತೆ , ಹುಣಸೂರು , ಜು. 6
ತಾಲೂಕಿನಲ್ಲಿ 195 ಮಂದಿ ಜೀತದಾಳುಗಳಿಗೆ ಕೂಡಲೇ ಬಿಡುಗಡೆ ಪತ್ರ ನೀಡಬೇಕೆಂದು ಆಗ್ರಹಿಸಿ ದಸಂಸ ತಾಲೂಕು ಘಟಕ ಶನಿವಾರ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿತು.
ಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಫೆಬ್ರವರಿ 2013 ರಲ್ಲಿ ತಾಲೂಕಿನಲ್ಲಿ 195 ಮಂದಿ ಜೀತಗಾರಿಕೆ ಮಾಡುತ್ತಿದ್ದಾರೆಂದು ತಾಲೂಕು ಆಡಳಿತ ತಿಳಿಸಿದೆ.
ಜೀತಗಾರರ ಪತ್ತೆಗಾಗಿ ಪ್ರತಿ ಹೋಬಳಿಗೂ ತಾಲೂಕು ಮಟ್ಟದ ಒಬ್ಬ ಅಧಿಕಾರಿ ಹಾಗೂ ಐವರು ಸದಸ್ಯರ ತಂಡ ರಚಿಸಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದೆ. ಜೀತಗಾರರನ್ನು ಗುರುತಿಸಿ ಆರು ತಿಂಗಳುಗಳೆ ಕಳೆದಿದ್ದರೂ, ಇಂದಿಗೂ ಈ ಜೀತಗಾರಿಗೆ ಬಿಡುಗಡೆ ಪತ್ರ ದೊರಕಿಲ್ಲ ಹಾಗೂ ಅವರ ಪುನರ್ವಸತಿ ಕಾರ್ಯವು ನಡೆದಿಲ್ಲ. ಸರ್ಕಾರ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಸದಸ್ಯರಾದ ದೇವೇಂದ್ರ, ಗಜೇಂದ್ರ, ಸಾಕಯ್ಯ, ಆದಿಜಾಂಬವ ಸಂಘದ ಡಿ. ಕುಮಾರ್, ಬೆಳ್ತೂರು ಮಹದೇವ್, ಜೀವಿಕ ಸಂಸ್ಥೆಯ ವೆಂಕಟೇಶ್, ಬೀರನಹಳ್ಳಿ ಮಹದೇವ್, ಚಂದ್ರು ಇದ್ದರು.
ಪುನರ್ವಸತಿ ಕಲ್ಪಿಸಲು ಆಗ್ರಹ
ಪಿರಿಯಾಪಟ್ಟಣ: ತಾಲೂಕಿನಲ್ಲಿ ಜೀತ ವಿಮುಕ್ತರನ್ನು ಗುರುತಿಸಿ ಸಮಗ್ರ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಜೀತವಿಮುಕ್ತಿ ಕರ್ನಾಟಕ ಸರ್ವೋದಯ ಸೇವಾ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟಿಸಿದರು.
ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಎಂ.ಕೆ. ಸವಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಸಂಚಾಲಕ ಶಿವರಾಜು ಎಚ್. ಮಟಕೆರೆ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ಜೀತದಾಳುಗಳನ್ನು ಗುರುತಿಸಿ ಜೀತವಿಮುಕ್ತಿಗೊಳಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಈಗಾಗಲೆ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಜೀತದಾಳುಗಳ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರಸಕ್ತ ಬಜೆಟ್‌ನಲ್ಲಿ ಜೀತದಾಳುಗಳ ವಿಮುಕ್ತಿಗೆ ಪ್ರತ್ಯೇಕ ಹಣ ಮೀಸಲಿಡಬೇಕು. ತಾಲೂಕಿನಲ್ಲಿ ಗುರುತಿಸಿರುವ ಜೀತದಾಳುಗಳಿಗೆ ಕೂಡಲೆ ಬಿಡುಗಡೆ ಪತ್ರ ಕೊಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿ, ಸರ್ಕಾರವು ಜೀತ ಪದ್ಧತಿಯನ್ನು ನಿರ್ಮೂಲನೆ ಗೊಳಿಸಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದಾಗಿಯೂ ಜೀತ ಪದ್ಧತಿ ಇದೆ ಎಂದಾದರೆ ನಮಗೆ ದಾಖಲೆ ಸಮೇತ ದೂರು ನೀಡಿ ಜೀತವನ್ನು ಪ್ರೋತ್ಸಾಹಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಮಹಿಳೆ ದೂರು: ತಮ್ಮ ಕುಟುಂಬಕ್ಕೆ 90 ಸಾವಿರಗಳನ್ನು ಸಾಲದ ರೂಪದಲ್ಲಿ ನೀಡಿ ತಿರಿಸಲು ಸಾಧ್ಯವಾಗದ ತಮಗೆ ತಮ್ಮ ಇಬ್ಬರು ಮಕ್ಕಳನ್ನು ಜೀತಕ್ಕೆ ಇಡುವಂತೆ ಒತ್ತಾಯ ಹೇರುತ್ತಿದ್ದಾರೆ ಎಂದು ಬೆಟ್ಟದಪುರ ಮಹಿಳೆಯೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಸಂಘಟನೆ ಜವರಯ್ಯ, ಕರಿಯಪ್ಪ, ಮಹದೇವಮ್ಮ, ಸೈಯದ್‌ಶರೀಫ್, ನಾಗರಾಜ್ ಇದ್ದರು.
ತಹಸೀಲ್ದಾರ್‌ಗೆ ಮನವಿ
ನಂಜನಗೂಡು: ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ಪ್ರತ್ಯೇಕ ಹಣ ಮೀಸಲಿಡುವಂತೆ ಆಗ್ರಹಿಸಿ, ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯಿಂದ ತಾಲೂಕು ಕಚೇರಿ ಮುಂಭಾಗ ಶನಿವಾರ ಒತ್ತಾಯಿಸಿ, ತಹಸೀಲ್ದಾರ್ ಅರುಳಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘಟನೆಯ ಸಂಚಾಲಕರಾದ ಶಿವರಾಜ್ ಎಚ್. ಮಟಕೆರೆ ಮಾತನಾಡಿ, ಬಿಡುಗಡೆಯಾದ ಜೀತದಾಳುಗಳಿಗೆ ಸರ್ಕಾರ ಎರಡು ಸಾವಿರ ರು.ಗಳನ್ನು ಮಾಸಾಶನವನ್ನಾಗಿ ನೀಡಬೇಕು ಹಾಗೂ ಜೀತ ವಿಮುಕ್ತರಾದವರಿಗೆ ಎರಡು ಲಕ್ಷ ರು.ಗಳನ್ನು ಪರಿಹಾರ ಧನವನ್ನಾಗಿ ಕೊಡಬೇಕು, ಅವರ ಕುಟುಂಬಗಳಿಗೆ 5 ಎಕರೆ ಭೂಮಿ ನೀಡಬೇಕೆಂದು ಒತ್ತಾಯಿಸಿದರು. ಸಂಚಾಲಕ ಶಿವರಾಜ್ ಎಚ್ ಮಟಕೆರೆ, ಗೋಪಯ್ಯ ಇದ್ದರು.