'ಕುವೆಂಪು, ದೇಜಗೌ ಕನ್ನಡದ ಆಧಾರ ಸ್ತಂಭ'
ಕ.ಪ್ರ.ವಾರ್ತೆ , ಮೈಸೂರು , ಜು. 6
ಆಧುನಿಕ ಕನ್ನಡದ ಬೆಳವಣಿಗೆಯಲ್ಲಿ ಕುವೆಂಪು ಹಾಗೂ ದೇಜಗೌ ಆಧಾರ ಸ್ತಂಭಗಳು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ಕುವೆಂಪು ವಿದ್ಯಾ ಪರಿಷತ್ತಿನ ನೌಕರರ ವರ್ಗ ಜಯಲಕ್ಷ್ಮೀಪುರಂನ ಸಂಸ್ಥೆಯ ವೆಂಕಣ್ಣಯ್ಯ ವೇದಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಶತಮಾನದ ಹೊಸ್ತಿಲಲ್ಲಿ ದೇಜಗೌ- ಸಂಭ್ರಮ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಕಣ್ಣು ತೆರೆಯುವ ಕಾಲದಲ್ಲಿ ತಮ್ಮ ಅದ್ಭುತ ಪರಿಕಲ್ಪನೆಯೊಂದಿಗೆ ಹೊಸಗನ್ನಡವನ್ನು ಸಾಹಿತ್ಯ ಪ್ರಪಂಚಕ್ಕೆ ಅನಾವರಣಗೊಳಿಸಿದ ದಾರ್ಶನಿಕ ಕುವೆಂಪು ಹಾಗೂ ಇಂಗ್ಲಿಷ್ಅನ್ನು ಹೇಗೆ ಎದುರಿಸಿ ಕನ್ನಡ ಬೆಳೆಸಬೇಕು ಎಂದು ಹೋರಾಟ ನಡೆಸಿ ಕನ್ನಡಕ್ಕೆ ಅನನ್ಯ ಕೊಡುಗೆ ನೀಡಿರುವ ಪ್ರೊ. ದೇಜಗೌ ಈ ಇಬ್ಬರು ಆಧುನಿಕ ಕನ್ನಡಕ್ಕೆ ಪ್ರಸ್ತುತರಾದವರು ಎಂದರು.
ಮೈಸೂರು ವಿವಿಯಲ್ಲಿ ಅನುವಾದ ವಿಭಾಗ ತೆರೆಯಲು ಅಂದಿನ ಕುಲಪತಿಯಾಗಿದ್ದ ದೇಜಗೌ ಅವರು ಹೇಳಿಕೆ ನೀಡಿದಾಗ ಅದನ್ನು ವಿರೋಧಿಸಿದ್ದೆ. ಇದು ನನ್ನ ಅವರ ನಡುವೆ ಜಗಳಕ್ಕೂ ಕಾರಣವಾಯಿತು. ಅನೇಕ ವಿವಿಗಳಲ್ಲಿ ಅನುವಾದ ವಿಭಾಗ ಇರುವಾಗ ಅದು ಪುನರಾವರ್ತೆನೆಯಾಗುವುದು ಬೇಡ ಎಂಬುದು ನನ್ನ ವಾದವಾಗಿತ್ತು. ಆದರೆ ಬಹುತೇಕ ವಿವಿಗಳ ಅನುವಾದ ವಿಭಾಗ ಮುಚ್ಚಿದ್ದು, ಇಲ್ಲಿನ ವಿವಿಯಲ್ಲಿ ಮಾತ್ರ ಈ ವಿಭಾಗ ಉಳಿದಿರುವುದು ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಈ ಕಾರ್ಯ ಸಾರ್ಥಕ ಎನ್ನಿಸಿದೆ ಎಂದು ತಿಳಿಸಿದರು.
ಡಾ. ಟಿ.ಕೆ. ಕೆಂಪೇಗೌಡ ರಚಿಸಿರುವ ದೇಜಗೌ ವಾಙ್ಮಯ, ಶತಮಾನದ ವ್ಯಕ್ತಿ, ಕನ್ನಡದ ಭೀಷ್ಮ, ಡಾ. ಎಂ. ವೆಂಕಟೇಶ್ ಅವರ ಕನ್ನಡಪ್ರಜ್ಞೆ ಮತ್ತು ದೇಜಗೌ, ವಿಚಾರಶೀಲ ದೇಜಗೌ, ಸಮಗ್ರ ಚಿಂತನಕಾರ ದೇಜಗೌ ಹಾಗೂ ಡಾ. ಅನುಸೂಯ ಕೆಂಪನಹಳ್ಳಿ ಅವರ ದೇಜಗೌ - 97 ಎಂಬ 7 ಕೃತಿಗಳನ್ನು ಹೆಸರಾಂತ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಲೋಕಾರ್ಪಣೆಗೊಳಿಸಿದರು.
ಸಂಸ್ಥೆಯ ವತಿಯಿಂದ ಪ್ರೊ. ದೇಜಗೌ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಈ ಸಂದರ್ಭದಲ್ಲಿ ಸಂಘ- ಸಂಸ್ಥೆಗಳು, ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಅಭಿನಂದಿಸಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ. ಜೆ. ಶಶಿಧರ ಪ್ರಸಾದ್ ಇದ್ದರು. ಶಾಸಕ ವಾಸು, ಕುವೆಂಪು ವಿದ್ಯಾ ಪರಿಷತ್ ಅಧ್ಯಕ್ಷ ಪ್ರೊ. ಎಸ್.ಎನ್. ರಾಮಸ್ವಾಮಿ ಮುಖ್ಯ ಅತಿಥಿಯಾಗಿದ್ದರು. ಉಪನ್ಯಾಸಕರಾದ ಎಂ.ಎನ್. ಲಿಂಗಪ್ಪ ಸ್ವಾಗತಿಸಿದರು. ಡಾ.ಟಿ.ಕೆ. ಕೆಂಪೇಗೌಡ ನಿರೂಪಿಸಿದರು.