ಕ್ಯಾನ್ಸರ್ ಗೆದ್ದ ಬಾಲಕ
ಎಚ್.ಡಿ. ಕೋಟೆ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕ ತಾಲೂಕಿನ ನಿಸರ್ಗ ಫೌಂಡೇಷನ್ ಸಂಸ್ಥೆಯ ಮಕ್ಕಳ ಸಹಾಯ ವಾಣಿ 1098 ತಂಡದ ಸಹಾಯದಿಂದ ಸಂಪೂರ್ಣ ಗುಣಮುಖನಾಗಿದ್ದಾನೆ.ತಾಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದ ಪೆರುಮಾಳ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ ಮಣಿ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಬಗ್ಗೆ ತಿಳಿಸಿ, ಸಹಾಯಹಸ್ತ ಕೋರಿದರು. ನಂತರ ಸಹಾಯವಾಣಿ ತಂಡವು ಸೂಕ್ತ ಮಾರ್ಗದರ್ಶನ ನೀಡಿ, ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಈ ಮಗುವಿಗೆ ಆರೋಗ್ಯ ಸೌಲಭ್ಯ ಒದಗಿಸಿಕೊಡುವಂತೆ ಕೋರಿದರು. ಅಧಿಕಾರಿಗಳು ಸೂಕ್ತ ದಾಖಲಾತಿ ಒದಗಿಸಿ ಬೆಂಗಳೂರಿನ ಇಂದಿರಾ ಗಾಂಧಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿ ಎರಡು ತಿಂಗಳು ಸೂಕ್ತ ಚಿಕಿತ್ಸೆ ನೀಡಲಾಯಿತು. ನಂತರ ಬಾಲಕ ಗುಣಮುಖವಾಗಿ ಆರೋಗ್ಯವಾಗಿದ್ದಾನೆ.
ವಿದ್ಯಾರ್ಥಿ ನಾಪತ್ತೆ
ಮೈಸೂರು: ಶಾರದಾ ವಿಲಾಸ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹಾಗೂ ಶ್ರೀನಿವಾಸ್, ಭಾಗ್ಯ ಎಂಬವರ ಪುತ್ರ ಎಸ್. ರಕ್ಷಿತ್ (13) ನಾಪತ್ತೆಯಾಗಿದ್ದಾರೆ. ಜೂ. 21ರಂದು ಶಾಲೆಗೆ ಹೋದ ತನ್ನ ಮಗ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡಿಕೊಡುವಂತೆ ಶ್ರೀನಿವಾಸ್ ದೂರು ನೀಡಿದ್ದಾರೆ. ಚಹರೆ- 4.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಹುಬ್ಬು ಹಲ್ಲು, ಬಲ ಹಣೆಯ ಮೇಲೆ ಹಳೆಯ ಗಾಯದ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418322 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಎಸ್ಐ ಕ್ಯಾತೇಗೌಡ ಕೋರಿದ್ದಾರೆ.
ಸಿಲಿಂಡರ್ ಸೋರಿಕೆ: ವೈದ್ಯೆಗೆ ಗಾಯ
ಮೈಸೂರು: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ವೈದ್ಯೆಯೊಬ್ಬರು ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಟಿ. ನರಸೀಪುರ ರಸ್ತೆ ಆಲನಹಳ್ಳಿ ಸಮೀಪದ ನೇಜಾತಿ ನಗರ ನಿವಾಸಿ ಡಾ. ಭಾನುಮತಿ (28) ಗಾಯಗೊಂಡವರು. ಬೆಳಗ್ಗೆ ಗ್ಯಾಸ್ ಸ್ಟೌವ್ ಹೊತ್ತಿಸಲು ಹೋದಾಗ ಬೆಂಕಿ ಹೊತ್ತುಕೊಂಡು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಜರ್ಬಾದ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರತ್ಯೇಕ ಪ್ರಕರಣ: ಮೂರು ಕಡೆ ಕಳವು
ಮೈಸೂರು: ನಗರದ ಮೂರು ಕಡೆ ಮನೆ ಬಾಗಿಲು ಮುರಿದು ಕಳವು ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಅಗ್ರಹಾರ ಜಮುನಾ ಬಾರ್ ಹಿಂಭಾಗ ನಿವಾಸಿ ಪ್ರವೀಣ್ ಚೋಪ್ರಾ ಅವರ ಮನೆ ಬಾಗಿಲು ಮುರಿದು 1.05 ಲಕ್ಷ ಮೌಲ್ಯದ 70 ಗ್ರಾಂ. ಚಿನ್ನಾಭರಣ, ನಗದು 10 ಸಾವಿರ, ಲ್ಯಾಪ್ಟಾಪ್ ಮತ್ತು ಬೆಳ್ಳಿ ವಸ್ತುಗಳು ಕಳವಾಗಿದೆ. ಪ್ರವೀಣ್ ಉದಯಗಿರಿಯಲ್ಲಿ ಡ್ರೈಫ್ರುಟ್ ಮಳಿಗೆ ನಡೆಸುತ್ತಿದ್ದು, ಜೂ. 30 ರಂದು ರಾಜಸ್ತಾನಕ್ಕೆ ತೆರಳಿದ್ದರು. ವಾಪಸ್ ಬಂದಾಗ ಕಳವಾಗಿರುವುದು ಗೊತ್ತಾಗಿದೆ. ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಲನಹಳ್ಳಿ ಸಮೀಪದ ನಂದಿನಿ ಬಡಾವಣೆಯ 2 ಮನೆಗಳಲ್ಲಿ ಕಳ್ಳತನ ನಡೆದಿದೆ. ಒಂದು ಮನೆಯಲ್ಲಿ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿದೆ. ಮತ್ತೊಂದು ಮನೆಯ ಮಾಲೀಕರು ಯಾರು ಇಲ್ಲದ ಕಾರಣ ಏನೇನು ಕಳವಾಗಿದೆ ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಈ ಎರಡು ಪ್ರಕರಣಗಳನ್ನು ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಗರಾಜ ಅವಿರೋಧ ಆಯ್ಕೆ
ಮೈಸೂರು: ಮೂಗೂರು ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಜಿ.ಆರ್. ನಾಗರಾಜ ಅವಿರೋಧ ಆಯ್ಕೆಯಾಗಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಂ. ಶ್ರೀಕಂಠ ಕುಮಾರ್ ನಾಗರಾಜ್ ಅವರನ್ನು ಅಭಿನಂದಿಸಿದ್ದಾರೆ.
ನೇಮಕ
ಮೈಸೂರು: ಸಮಾಜ ರಕ್ಷಣಾ ವೇದಿಕೆಯ ವಾರ್ಡ್ ನಂ. 59ನೇ ಅಧ್ಯಕ್ಷರಾಗಿ ಕ್ಯಾತಮಾರನಹಳ್ಳಿಯ ಚಿಕ್ಕಗರಡಿ ರಸ್ತೆಯ ನಿವಾಸಿ ವಿಜಯ್ ಹಾಗೂ ಬಿಜೆಪಿಯ ಕೃಷ್ಣರಾಜ ಕ್ಷೇತ್ರದ 2ನೇ ವಾರ್ಡ್ನ ಅಧ್ಯಕ್ಷರಾಗಿ ಕೆ.ಆರ್. ಮೊಹಲ್ಲಾದ ಸುಣ್ಣದಕೇರಿ ನಿವಾಸಿ ಕೆ. ಸಂತೋಷ್ ಕುಮಾರ್ ನೇಮಕವಾಗಿದ್ದಾರೆ.
ಅಂಗವಿಕಲರಿಗೆ ಕಾನೂನು ಅರಿವು
ಮೈಸೂರು: ನಗರಪಾಲಿಕೆಯಿಂದ 2012- 13ನೇ ಸಾಲಿನ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿ ಶಿಕ್ಷಣ ಶೀರ್ಷಿಕೆಯಡಿ ಜು. 11ರ ಬೆಳಗ್ಗೆ 10ಕ್ಕೆ ಜಗನ್ಮೋಹನ ಅರಮನೆಯಲ್ಲಿ ಅಂಗವಿಕಲರಿಗೆ ಕಾನೂನು ಅರಿವು ಜಾಗೃತಿ ಶಿಬಿರ ಏರ್ಪಡಿಸಲಾಗಿದೆ ಎಂದು ಪಾಲಿಕೆ ಉಪ ಆಯುಕ್ತರು ತಿಳಿಸಿದ್ದಾರೆ.
ಅಥ್ಲೆಟಿಕ್ಗಳ ಸಾಧನೆ
ಮೈಸೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 34ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ಮಾಸ್ಟರ್ ಅಥ್ಲೆಟ್ಗಳು 4 ಚಿನ್ನ, 10 ಬೆಳ್ಳಿ, 4 ಕಂಚಿನ ಪದಕ ಗಳಿಸಿದ್ದಾರೆ. ಅಥ್ಲೆಟ್ಗಳಾದ ಸುಬ್ಬಯ್ಯ, ಚಲುವೇಗೌಡ, ಎನ್.ಆರ್. ಶಂಕರರಾವ್ ಮತ್ತು ಎಚ್.ಆರ್. ರಾಮಸ್ವಾಮಿ, ಸುಬ್ಬಶೆಟ್ಟಿ, ಬಿ.ಸಿ. ಪಾರ್ವತಿ ಅವರು ಭಾಗವಹಿಸಿ ಹಲವಾರು ಪದಕ ಗಳಿಸಿದ್ದಾರೆ. ಈ ಕ್ರೀಡಾಪಟುಗಳನ್ನು ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಪಿ.ಜಿ. ಸತ್ಯನಾರಾಯಣ ಅಭಿನಂದಿಸಿದ್ದಾರೆ.
ಇಂದು ಪೂರ್ವಭಾವಿ ಸಭೆ
ಹುಣಸೂರು: ಬೆಂಗಳೂರಿನಲ್ಲಿ ಸೆ. 17 ರಂದು ರಾಜ್ಯಮಟ್ಟದ 5ನೇ ವಿಶ್ವಕರ್ಮ ಜಯಂತ್ಯುತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ವಿಭಾಗದ ಪೂರ್ವಭಾವಿ ಸಭೆಯು ಜು. 7ರ ಭಾನುವಾರ ಮೈಸೂರಿನ ಗನ್ಹೌಸ್ ಬಳಿಯಿರುವ ವಿದ್ಯಾಭಾರತಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಪೂರ್ವಭಾವಿ ಸಭೆಗೆ ತಾಲೂಕಿನ ಸಮಾಜದ ಬಾಂಧವರು ತಪ್ಪದೆ ಭಾಗವಹಿಸುವಂತೆ ಮುಖಂಡರಾದ ರೇವಣ್ಣ, ನಾರಾಯಣ, ಜಯರಾಮಾಚಾರಿ, ದಿವಾಕರ, ಕೃಷ್ಣಾಚಾರ್, ಚಂದ್ರು, ಶಿವಣ್ಣಾಚಾರ್, ಶ್ರೀನಿವಾಸಾಚಾರಿ, ಶರಣು, ಶ್ರೀಕಂಠ, ಸುರೇಶ ತಿಳಿಸಿದ್ದಾರೆ.
ಬೈಕ್ ಡಿಕ್ಕಿ: ಮಹಿಳೆ ಸಾವು
ಕೆ.ಆರ್. ನಗರ: ಟ್ರ್ಯಾಕ್ಟರ್- ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಹೊಸೂರು ರಾಮಲಿಂಗೇಶ್ವರ ಗೇಟ್ ಬಳಿ ಜರುಗಿದೆ. ಇಲ್ಲಿನ ವಿಜಯನಗರ ಬಡಾವಣೆಯ ನಿವಾಸಿ ಲಕ್ಷ್ಮಮ್ಮ (55) ಮೃತಪಟ್ಟ ದುರ್ದೈವಿ. ಬೈಕ್ ಸವಾರ ವಾಸು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಸೂರಿನಿಂದ ಕೆ.ಆರ್. ನಗರಕ್ಕೆ ಬರುತ್ತಿದ್ದ ಬೈಕ್- ಟ್ರ್ಯಾಕ್ಟರ್ಅನ್ನು ಹಿಂದಿಕ್ಕುವಾಗ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ವೇಳೆ ಟ್ರ್ಯಾಕ್ಟರ್ಗೆ ರಭಸವಾಗಿ ಗುದ್ದಿದ ಪರಿಣಾಮ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೆ.ಆರ್. ನಗರ ಎಸ್ಐ ವನರಾಜು ಭೇಟಿ ನೀಡಿ ಪರಿಶೀಲಿಸಿದರು. ಠಾಣೆಯಲ್ಲಿ ದೂರು ದಾಖಲಾಗಿದೆ.