ವಿಶ್ವಕೋಶ ಕಾರ್ಯ ಇನ್ನೂ ಪೂರ್ಣವಾಗಿಲ್ಲ: ಡಾ. ಹಂಪನಾ
ಮೈಸೂರು: ಅಂದು ಪ್ರೊ. ದೇಜಗೌ ಅವರು ಆರಂಭಿಸಿದ ವಿಶ್ವಕೋಶ ಕಾರ್ಯ ಇನ್ನೂ ಪೂರ್ಣವಾಗಿಲ್ಲ ಎಂದು ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ ಶನಿವಾರ ಏರ್ಪಡಿಸಿದ್ದ ಶತಮಾನದ ಹೊಸ್ತಿಲಲ್ಲಿ ದೇಜಗೌ- ಸಂಭ್ರಮ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುವೆಂಪು ಅವರ ಕನಸು ನನಸಾಗಿಸಲು ಮಾನಸಗಂಗೋತ್ರಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿದ ಪ್ರೊ. ದೇಜಗೌ, ಕನ್ನಡದಲ್ಲಿ ವಿಶ್ವಕೋಶ ಇಲ್ಲದಿರುವುದನ್ನು ಮನಗಂಡು ಕೆ.ವಿ. ಶಂಕರೇಗೌಡ ಅವರು ಶಿಕ್ಷಣ ಸಚಿವರಾಗಿದ್ದಾಗ ಈ ಯೋಜನೆಯನ್ನು ಮಂಜೂರು ಮಾಡಿಸಿ ಆ ಕಾರ್ಯ ಚಾಲನೆಗೊಳಿಸಿದರು. ಆದರೆ, ಇಂದಿಗೂ ಅದು ಸಂಪೂರ್ಣವಾಗಿಲ್ಲ ಎಂದರು. ಕನ್ನಡ ಸಾಹಿತ್ಯ ಸಂವರ್ಧನೆಯ ಜತೆಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವೆಯಲ್ಲಿ ಕಳೆದ 60 ವರ್ಷಗಳಿಂದ ಬಹುರೂಪಿ ಕೊಡುಗೆ ನೀಡುತ್ತಿರುವ ದೇಜಗೌ ಅವರು, ಸಮುದಾಯ ಕಟ್ಟಿ ಬೆಳೆಸಿದ ಚೇತನ. ಗುಡಿಸಲಿನಿಂದ ಗಂಗೋತ್ರಿಯವರೆಗೆ ಹೋರಾಟ ನಡೆಸಿ ತಮ್ಮ ಸಾಧನೆ ಹಾಗೂ ಶ್ರಮದಿಂದ ಬದುಕು ಕಟ್ಟಿಕೊಂಡವರು. ಹಾಗೆಯೇ ಇತರರ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದವರು. ನನ್ನ ಬದುಕಿಗೂ ಅವರೇ ಕಾಂತಿ ಎಂದು ಅವರು ಸ್ಮರಿಸಿದರು.
ವಿಚಾರ ಗೋಷ್ಠಿ: ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಆಧುನಿಕ ಕನ್ನಡ ಗದ್ಯ ಮತ್ತು ದೇಜಗೌ ಎಂಬ ವಿಷಯ ಕುರಿತು ಬೆಳಗಾವಿಯ ಸಾಹಿತಿ ಡಾ. ಗುರುಪಾದ ಮರಿಗುದ್ದಿ, ಅನುವಾದ ಕ್ಷೇತ್ರಕ್ಕೆ ದೇಜಗೌ ಕೊಡುಗೆ ಎಂಬ ವಿಷಯ ಕುರಿತು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ. ಸಿ. ನಾಗಣ್ಣ ಹಾಗೂ ದೇಜಗೌ ಮತ್ತು ಜನಪದ ಎಂಬ ವಿಷಯ ಕುರಿತು ಧಾರವಾಡದ ವಿದ್ವಾಂಸ ಪ್ರೊ. ಕೆ.ಆರ್. ದುರ್ಗಾದಾಸ್ ಮಾತನಾಡಿದರು.
ಎರಡನೇ ಗೋಷ್ಠಿಯಲ್ಲಿ ದೇಜಗೌ ಕಾವ್ಯದ ನೆಲೆಗಳು ಎಂಬ ವಿಷಯ ಕುರಿತು ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ಪಿ. ಆಶಾಕುಮಾರಿ, ದೇಜಗೌ ಕನ್ನಡಪರ ಚಿಂತನೆ ಎಂಬ ವಿಷಯ ಕುರಿತು ಬೆಂಗಳೂರಿನ ಸಾಹಿತಿ ಡಾ. ಕೋ.ವೆಂ. ರಾಮಕೃಷ್ಣೇಗೌಡ ಹಾಗೂ ದೇಜಗೌ ಜೀವನದೃಷ್ಟಿ ಎಂಬ ವಿಷಯ ಕುರಿತು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಮಾತನಾಡಿದರು.