ಅಭಿವೃದ್ಧಿಗೆ ಅನುದಾನ ನೀಡಲು ಮನವಿ
ಹುಣಸೂರು: ಆದಿವಾಸಿಗಳು, ದಲಿತರು, ಹಿಂದುಳಿದವರು, ಅಲೆಮಾರಿಗಳು ಹೆಚ್ಚು ವಾಸಿಸುವ ಹುಣಸೂರು ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಡೀಡ್ ಸಂಸ್ಥೆ ಮುಖ್ಯಸ್ಥ ಎಸ್. ಶ್ರೀಕಾಂತ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಡಿ. ದೇವರಾಜ ಅರಸರು ಪ್ರತಿನಿಧಿಸಿದ ಹುಣಸೂರು ಕ್ಷೇತ್ರವು ಉಪ-ವಿಭಾಗ ಕೇಂದ್ರವಾಗಿದ್ದು, ಕರ್ನಾಟಕ ವಿಕಾಸ ವಾಹಿನಿಯು ಮುಖ್ಯಮಂತ್ರಿ, ಶಾಸಕ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೇಡಿಕೆ: ಹುಣಸೂರು ತಾಲೂಕನ್ನು ಜಿಲ್ಲೆಯನ್ನಾಗಿಯೂ ಹಾಗೂ ಪಟ್ಟಣ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ತಾಲೂಕಿನಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯನ್ನು ಜೀವಜಲ ನದಿಯನ್ನಾಗಿಸಲು 60 ಕಿಮೀ ಉದ್ದ ನದಿಯ ಎರಡು ಬದಿಯಲ್ಲಿ ಪಾರಂಪರಿಕ ಮರ- ಗಿಡ ಬೆಳಸಬೇಕು.
ನದಿಗಿರುವ 26 ಜಲಮೂಲ ರಕ್ಷಿಸಿ ಅಭಿವೃದ್ಧಿ ಪಡಿಸಬೇಕು. ಮರಳು ಸಂಗ್ರಹಣೆ ನಿಷೇಧಿಸಬೇಕು, ನದಿ ಸಂರಕ್ಷಣಾ ಸಮಿತಿ ರಚಿಸಬೇಕು. ಪಟ್ಟಣದ ಕೊಳಚೆ ನೀರು ನದಿಗೆ ಸೇರುವುದನ್ನು ತಪ್ಪಿಸಲು, ಒಳ ಚರಂಡಿ ವ್ಯವಸ್ಥೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.