ಕಾಡಿನ ರಕ್ಷಣೆಗೆ ಚಾರಣ ಸಹಕಾರಿ: ಕಾಂತರಾಜು
ಕ.ಪ್ರ.ವಾರ್ತೆ , ಮೈಸೂರು , ಜು. 7
ಕಾಡಿನ ರಕ್ಷಣೆಗೆ ಚಾರಣ ಸಹ ಸಹಕಾರಿಯಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ. ಕಾಂತರಾಜು ಹೇಳಿದರು.
ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗಂಗೋತ್ರಿ ಘಟಕವು ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಇಲಾಖೆಯಲ್ಲಿ ಶೇ. 40 ರಷ್ಟು ಹುದ್ದೆಗಳು ಖಾಲಿ ಉಳಿದಿರುವುದರಿಂದ ಸಿಬ್ಬಂದಿ ಕೊರತೆಯಿದೆ. ಆದ್ದರಿಂದ ಕಾಡಿಗೆ ಚಾರಣಕ್ಕೆ ಬರುವವರಿಗೆ ಸಹಕಾರಿ ನೀಡಿ ಮುಕ್ತವಾಗಿ ಅವಕಾಶ ಮಾಡಿಕೊಳ್ಳುತ್ತೇವೆ. ಅರಣ್ಯ ವೀಕ್ಷಿಸಲು ಅವಕಾಶ ಮಾಡಿಕೊಡುವುದು ಅವರಿಗೆ ಸಹಕಾರವಾದರೆ, ನಮಗೆ ಶಿಬಿರಾರ್ಥಿಗಳು ಬಂದರೆ ಕಾಡಿನ ರಕ್ಷಣೆಯಾಗಲಿದೆ. ಇದರಿಂದಾಗಿ ಪರಸ್ಪರ ನೆರವಾಗುತ್ತಿದೆ ಎಂದರು.
ಬಂಡೀಪುರ ಅರಣ್ಯ ವೀಕ್ಷಣೆಗೆ ಪ್ರತಿವರ್ಷ 2 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಗೋಪಾಲಸ್ವಾಮಿ ಬೆಟ್ಟಕ್ಕೆ 1.20 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ 146 ಗ್ರಾಮಗಳಿದ್ದು, 3 ಲಕ್ಷ ಜನರು ಹಾಗೂ 2 ಲಕ್ಷ ಜಾನುವಾರುಗಳಿದ್ದರೂ ಯಾವುದೇ ತಡೆಯಾಗಿಲ್ಲ ಎಂದು ತಿಳಿಸಿದರು.
ಕಳೆದ 3 ವರ್ಷಗಳಿಂದ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಇಲ್ಲಿನ ಆನೆ, ಕಾಡಮ್ಮೆ ಮತ್ತಿತರ ಪ್ರಾಣಿಗಳು ಬೇರೆ ಕಡೆಗೆ ವಲಸೆ ಹೋಗುತ್ತವೆ. ಹುಲಿ ಮತ್ತಿತರ ಸ್ಥಳೀಯ ಪ್ರಾಣಿಗಳಿಗೆ ನೀರು ಒದಗಿಸಲು ಮಾನವ ನಿರ್ಮಿತ ತೊಟ್ಟಿ ಕಲ್ಪಿಸಿ ಹೊರಗಿನಿಂದ ನೀರು ತಂದು ಸಂಗ್ರಹಿಸುವ ಕೆಲಸ ಮಾಡಲಾಯಿತು. ಈ ಕಾಂಕ್ರಿಟ್ ತೊಟ್ಟಿಗಳ ನಿರ್ಮಾಣಕ್ಕೆ ಪರಿಸರವಾದಿಗಳ ವಿರೋಧವು ಕೇಳಿ ಬಂದಿತ್ತು ಎಂದರು. ಪ್ರಾಣಿಗಳ ನೀರು ಸರಬರಾಜಿಗೆ ಹಾಗೂ ಇಲ್ಲಿನ ದಿನಗೂಲಿ ನೌಕರರಿಗೆ ಪರಿಕರ ನೀಡುವಲ್ಲಿ ಯೂಥ್ ಹಾಸ್ಟೆಲ್ ಸದಸ್ಯರು ನೆರವು ನೀಡಿರುವುದು ಅಭಿನಂದನಿಯ. 35 ಜನರ ತಂಡ ಬಂದರೆ ಕಾಡು ನೋಡಲು ಹಾಗೂ ಶಿಬಿರ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಪರಿಸರ ತಜ್ಞ ಕೆ.ಬಿ. ಸದಾನಂದ, ವೈಎಚ್ಐ ಸದಸ್ಯರಾದ ಆರ್.ಜಿ. ನಾಗರಾಜ್, ವೈ.ಎನ್ ರಾಜೇಂದ್ರ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷ ಎ.ಜೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪರಶಿವಮೂರ್ತಿ ಸ್ವಾಗತಿಸಿದರು. ಕೆ.ಎಂ. ಗೋಪಿ ಪ್ರಸ್ತಾವಿಕ ಮಾತನಾಡಿದರು.
ಪ್ರದರ್ಶನ: ಇದೇ ವೇಳೆ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಚಟುವಟಿಕೆಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಅಲ್ಲದೆ, ಸಂಸ್ಥೆ ಸಂಗ್ರಹಿಸಿರುವ ಪ್ರವಾಸಿ ತಾಣಗಳ ಛಾಯಾಚಿತ್ರಗಳು ಹಾಗೂ ಉತ್ತರಾಖಂಡದ ನಾಲ್ಕು ದೇವ ಭೂಮಿಗಳ ಕುರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.