'ಜೀವನದಲ್ಲಿ ವಚನಕಾರರ ತತ್ವ ಅಳವಡಿಸಿಕೊಳ್ಳಿ'
ಕ.ಪ್ರ.ವಾರ್ತೆ , ಮೈಸೂರು , ಜು. 7
ಮನಸ್ಸಿನ ಖಿನ್ನತೆ, ದುಶ್ಚಟಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಇದೆ ಎಂದು ಶಾಸಕ ವಾಸು ಹೇಳಿದರು.
ವಿಜಯನಗರದಲ್ಲಿ ಬಸವ ಸಮಿತಿ ಭಾನುವಾರ ಏರ್ಪಡಿಸಿದ್ದ ಶರಣ ಸಂಗಮ- 187 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಯಲ್ಲಿ ಹಿರಿಯರ ಪಾತ್ರ ದೊಡ್ಡದು. ಆಧುನಿಕ ಸಮಾಜಕ್ಕೆ ವಚನಗಳು ಪ್ರಸ್ತುತವಾಗಿದೆ. ವಚನಕಾರರ ಕೊಡುಗೆ ಅಪಾರವಾಗಿದ್ದು, ಅವರ ತತ್ವ ನಾವು ಅನುಸರಿಸಬೇಕು. ನಮ್ಮ ಅನೇಕ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ ಇದೆ ಎಂದರು. ಆಧುನಿಕ ಸಮಾಜಕ್ಕೆ ವಚನಗಳ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದ ರಾಮಕೃಷ್ಣ ವಿದ್ಯಾಶಾಲೆಯ ಹಿರಿಯ ಉಪನ್ಯಾಸಕ ಎಸ್.ಎಸ್. ರಮೇಶ್ ಅವರು, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ವಚನಗಳಲ್ಲಿ ಅಹಂಕಾರದಿಂದಾಗುವ ತೊಂದರೆ ತಿಳಿಸಿರುವುದಾಗಿ ಹೇಳಿದರು. ಬಸವ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು.