ಬೆಟ್ಟದಪುರ ಎಪಿಎಂಸಿ ಮಳಿಗೆ ಹರಾಜು
ಕ.ಪ್ರ.ವಾರ್ತೆ ರಾವಂದೂರು ಜು. 8
ಬಹಳ ದಿನಗಳಿಂದ ತಾಂತ್ರಿಕ ಕಾರಣಗಳಿಂದ ಹಾಗೆ ಉಳಿದಿದ್ದ ತಾಲೂಕು ಕೃಷಿ ಉತ್ಪನ್ನ ಸಮಿತಿಗೆ ಸೇರಿದ್ದ ಬೆಟ್ಟದಪುರ ಉಪ ಮಾರುಕಟ್ಟೆಯಲ್ಲಿದ್ದ 6 ಮಳಿಗೆಗಳನ್ನು ಮಾರುಕಟ್ಟೆ ಅಧಿಕಾರಿಗಳು ಬಹಿರಂಗ ಹರಾಜು ಮಾಡಿ, ಸೋಮವಾರ ಬಾಡಿಗೆಗೆ ನೀಡಿದರು.
ಬೆಟ್ಟದಪುರದ ಉಪಮಾರುಕಟ್ಟೆ ಹೊಂದಿಕೊಂಡಂತೆ 6 ಮಳಿಗೆಗಳನ್ನು ಕಳೆದ 5 ವರ್ಷಗಳ ಹಿಂದೆಯೆ ನಿರ್ಮಿಸಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದ ಇವುಗಳನ್ನು ಬಾಡಿಗೆಗೆ ನೀಡದೆ ಹಾಗೆಯೆ ಬಿಡಲಾಗಿತ್ತು. ಇತ್ತೀಚೆಗೆ ಎಪಿಎಂಸಿಯ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ಆಡಳಿತ ಮಂಡಳಿಯು ಕೊನೆಗೂ ಇವುಗಳನ್ನು ಬಹಿರಂಗವಾಗಿ ಹಾರಾಜು ಮಾಡಿ ಬಾಡಿಗೆಗೆ ನೀಡಲಾಯಿತು.
ಈ ಬಗ್ಗೆ ವಿವರ ನೀಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶ್ರೀಕಂಠಪ್ರಭು, ತಾಲೂಕಿನ ಬೆಟ್ಟದಪುರ ಸಂತೆಯೂ ಪ್ರತಿ ಭಾನುವಾರ ನಡೆಯುತ್ತಿದ್ದು, ಈ ಸಂತೆಯನ್ನು ಬೆಟ್ಟದಪುರ ಉಪಮಾರುಕಟ್ಟೆಯಲ್ಲಿ ನಡೆಸುವಂತೆ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಗ್ರಾಪಂ ಆಡಳಿತ ವರ್ಗ ವರ್ತಿಸುತ್ತಿದೆ ಎಂದು ತಿಳಿಸಿದರು. ಕೆಲವು ತಾಂತ್ರಿಕ ಕಾರಣದಿಂದ ಬಾಡಿಗೆ ನೀಡದೆ ಹಾಗೇ ಬಿಡಲಾಗಿದ್ದು, ಈಗ ಎಲ್ಲ ಸಮಸ್ಯೆಗಳು ಬಗೆಹರಿದಿರುವುದರಿಂದ ಬರುವ ಆ. 1ರಿಂದ ಅನ್ವಯವಾಗುವಂತೆ ಮಳಿಗೆಗಳನ್ನು ಹರಾಜು ಮೂಲಕ ಬಾಡಿಗೆಗೆ ನೀಡಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಸದಸ್ಯರಾದ ಎಸ್.ಟಿ. ರಾಜಶೇಖರ್, ಸ್ವಾಮೇಗೌಡ, ರವಿಗೌಡ ಹಾಗೂ ಎಪಿಎಂಸಿಯ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.