ಮಗುವನ್ನು ನಾಲೆಗೆ ಎಸೆದು ಕೊಂದ ತಂದೆ
ನಂಜನಗೂಡು: ಕುಡಿದ ಅಮಲಿನಲ್ಲಿ ತಂದೆಯೇ ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ನಾಲೆಗೆ ಎಸೆದು ಕೊಂದಿರುವ ಘಟನೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಿರಗುಂದ ನಿವಾಸಿ ಸುರೇಶ್ ಎಂಬಾತ ತನ್ನ ದ್ವಿತೀಯ ಪುತ್ರಿ ಸಹನಾಳನ್ನು (3) ನಾಲೆಗೆ ಎಸೆದ ಆರೋಪಿ. ಕುಡಿದ ಅಮಲಿನಲ್ಲಿದ್ದ ಸುರೇಶ್ ಪತ್ನಿಯೊಡನೆ ಜಗಳ ಮಾಡಿರುವುದಲ್ಲದೆ ಸಹನಾಳನ್ನು ನಾಲೆಗೆ ಎಸೆದಿದ್ದಾನೆ. ಸಹನಾಳ ಶವ ಟಿ. ನರಸೀಪುರ ಸಮೀಪದ ಸುಜ್ಜಲೂರಿನ ಬಳಿ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಸುರೇಶ್ನನ್ನು ಕಂಬಕ್ಕೆ ಕಟ್ಟಿ ಹಾಕಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಡಿದ ಅಮಲು ಇಳಿದ ಬಳಿಕ ಸುರೇಶ್ ತಾನು ಮಗುವನ್ನು ನಾಲೆಗೆ ಎಸೆದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದ. ಆದರೆ, ಈ ಸಂಬಂಧ ಬದನವಾಳು ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆಯ ವೇಳೆಗೆ ಸಹನಾ ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿದೆ. ಪತಿಯನ್ನು ರಕ್ಷಿಸಲು ಪತ್ನಿ ಮತ್ತು ಸಂಬಂಧಿಕರು ಈ ರೀತಿ ದೂರು ನೀಡಿರಬಹುದು ಎಂದು ಶಂಕಿಸಲಾಗಿದೆ.