ಶಾಲೆಗೆ ಹೋಗಲು ಮಕ್ಕಳ ಹರಸಾಹಸ
ಚಾಮರಾಜನಗರ: ಮಳೆ ಬಂದರೆ ಸಾಕು, ನಗರದ ಚೆನ್ನಿಪುರಮೋಳೆಯಲ್ಲಿರುವ ಪ್ರತಿಷ್ಠಿತ ಸೇವಾಭಾರತಿ ಶಿಕ್ಷಣ ಸಂಸ್ಥೆಗೆ ಹೋಗುವ ದಾರಿಗಳೆಲ್ಲ ಬಂದ್ ಆಗುತ್ತವೆ. ಶಾಲೆಯ ಸುತ್ತಲೂ ಕಪ್ಪು ಮಣ್ಣು ಇರುವುದರಿಂದ ಮಳೆ ಬಂದ ಸಮಯದಲ್ಲಿ ಕಾಲಿಟ್ಟರೆ ಸಾಕು, ಸರ್ರನೆ ಮಕ್ಕಳು ಜಾರುವ ದೃಶ್ಯ ಮಾಮೂಲಿ. ಸೋಮವಾರವಂತೂ ಶಾಲೆ ಬಿಡುವ ವೇಳೆಗೆ ಸರಿಯಾಗಿ ಮಳೆ ಬಂದಿದ್ದರಿಂದ ಮಕ್ಕಳನ್ನು ಮನೆಗೆ ಕರೆದೊಯ್ಯಲು ಪೋಷಕರು, ವಾಹನ ಚಾಲಕರು ಹರಸಾಹಸ ಮಾಡಬೇಕಾಯಿತು. ಶಾಲೆಯಿಂದ ಮನೆಗೆ ಹೋಗುವ ಭರದಲ್ಲಿ ಕೆಲ ಮಕ್ಕಳು ಜಾರಿ ಬಿದ್ದು ಬಟ್ಟೆಯೆಲ್ಲ ಕೆಸರುಮಯವಾಯಿತು. ಸೇವಾಭಾರತಿ ವಿದ್ಯಾಸಂಸ್ಥೆಗೆ ಹೋಗಲು ಎರಡು- ಮೂರು ದಾರಿಗಳಿದ್ದು, ಶಾಲೆಯ ಸುತ್ತಲೂ ಕಪ್ಪು ಮಣ್ಣು ಇದೆ. ಚೆನ್ನಿಪುರ ಮೋಳೆಗೆ ರಸ್ತೆ ಪರವಾಗಿಲ್ಲ ಎನ್ನುವ ಮಟ್ಟಕ್ಕಿತ್ತು. ಇದೀಗ ಒಳಚರಂಡಿ ಕಾಮಗಾರಿ ನಡೆಸುತ್ತಿರುವುದರಿಂದ ರಸ್ತೆಯೆಲ್ಲಾ ಹಾಳಾಗಿದ್ದು, ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಆದ್ದರಿಂದ ಮಕ್ಕಳು ಶಾಲೆಗೆ ಹೋಗಿ- ಬರಲು ಸರಿಯಾದ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.