ಸುದ್ದಿ ಸಂಕ್ಷೇಪ
ಹನಗೋಡಿನಲ್ಲಿ ಗ್ರಾಮ ಸಭೆ ಇಂದು
ಹುಣಸೂರು: ತಾಲೂಕಿನ ಹನಗೋಡು ಗ್ರಾಪಂನ ಎಲ್ಲ ಗ್ರಾಮಗಳ ವಾರ್ಡ್ ಸಭೆ ಮುಗಿದಿದ್ದು, ಜು. 9ರಂದು ಗ್ರಾಮದ ಗ್ರಾಪಂ ಆವರಣದಲ್ಲಿ ಬೆಳಗ್ಗೆ 11ಕ್ಕೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಮಹೇಶ್ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯದೆ. ಗ್ರಾಮಸ್ಥರು ಭಾಗವಹಿಸುವಂತೆ ಪಿಡಿಒ ಬಿ. ಮಣಿ ತಿಳಿಸಿದ್ದಾರೆ.
ವಿಶ್ವ ಜನಸಂಖ್ಯಾ ದಿನಾಚರಣೆ
ಕೆ.ಆರ್. ನಗರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಜು. 11ರ ಬೆಳಗ್ಗೆ 11ಕ್ಕೆ ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಶಾಸಕ ಸಾ.ರಾ. ಮಹೇಶ್ ದಿನಾಚರಣೆ ಉದ್ಘಾಟಿಸಲಿದ್ದು, ತಾಪಂ ಅಧ್ಯಕ್ಷೆ ಕವಿತಾರವಿ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯರಾದ ಸಿ.ಜೆ. ದ್ವಾರಕೀಶ್, ರಾಜಯ್ಯ, ನಳಿನಾಕ್ಷಿ ವೆಂಕಟೇಶ್, ಪುಷ್ಪಲತಾ ರಮೇಶ್, ಕಲ್ಪನಾ ಧನಂಜಯ, ಸುಮಿತ್ರ ಗೋವಿಂದರಾಜು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್‌ಖಾನ್, ಉಪಾಧ್ಯಕ್ಷೆ ಶಕುಂತಲಾ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪದಾಧಿಕಾರಿಗಳ ನೇಮಕ
ಎಚ್.ಡಿ. ಕೋಟೆ: ಅಖಿಲ ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ತಾಲೂಕು ಗೌರವಾಧ್ಯಕ್ಷರಾಗಿ ಚೆಕ್ಕೂರು ಗ್ರಾಮದ ಆರ್. ನಿಂಗನಾಯಕ, ಅಧ್ಯಕ್ಷರಾಗಿ ನಿಲುವಾಗಿಲು ಗ್ರಾಮದ ಕಾಂತನಾಯಕ ನೇಮಕವಾಗಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಬೈಲುಕುಪ್ಪೆ: ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಬಿ.ಎಂ. ರಸ್ತೆ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಮೃತರು ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಗ್ರಾಮದ ಮಂಜ ಅಲಿಯಾಸ್ ಚಂದ್ರ (34) ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಅರಣ್ಯ ರಕ್ಷಕ ದಂಡೆಯ ಗಸ್ತು ತಿರುಗುವ ಸಂದರ್ಭದಲ್ಲಿ ಶವ ಪತ್ತೆಯಾಗಿದ್ದು, ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದರು. ಶವದ ಪಕ್ಕದಲ್ಲಿ ವಿಷ ಹಾಗೂ ಎರಡು ಮದ್ಯದ ಬಾಟಲು, ಒಂದು ನೀರಿನ ಬಾಟಲು ಮತ್ತು ಒಂದು ಛತ್ರಿ, ಒಂದು ಮೊಬೈಲ್ ಸಿಕ್ಕಿದೆ. ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಲಾಯಿತು. ಎಎಸ್‌ಐ ಸೋಮಯ್ಯ ಹಾಗೂ ಮುಖ್ಯಪೇದೆ ಮಾದೇಗೌಡ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.