ಗ್ರಾಮೀಣಾಭಿವೃದ್ಧಿಗೆ ಸ್ವಸಹಾಯ ಸಂಘಗಳು ಶ್ರಮಿಸಲಿ: ಎಚ್ಎಸ್ಎಂ
ಕ.ಪ್ರ. ವಾರ್ತೆ, ಹುಣಸೂರು, ಜು. 9
ಸ್ವ- ಸಹಾಯ ಸಂಘಗಳು ಕೇವಲ ವಾರಕ್ಕೊಂದು ಬಾರಿ ಹಣ ಉಳಿತಾಯಕ್ಕಾಗಿ ಮೀಸಲಿರಿಸದೆ, ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಕರೆ ನೀಡಿದರು.
ತಾಲೂಕಿನ ನೇರಳಕುಪ್ಪೆ ಗ್ರಾಮದ ಪರಿಸರ ಪುರುಷ ಸ್ವ- ಸಹಾಯ ಸಂಘಕ್ಕೆ ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಧನಸಹಾಯ ಹಾಗೂ ಕಿರು ಸಾಲದ ಚೆಕ್ ವಿತರಿಸಿ ಮಾತನಾಡಿ, ಸಂಘದ ಸದಸ್ಯರು ಕೇವಲ ವಾರದ ಉಳಿತಾಯ ಹಾಗೂ ಸಾಲ ಪಡೆಯುವ ಉದ್ದೇಶಕ್ಕಾಗಿ ಸಂಘ ಬಳಸಿಕೊಳ್ಳದೆ ಸಂಘದ ಸದಸ್ಯರು ತಮ್ಮ ಗ್ರಾಮ ಹಾಗೂ ಸಮಾಜದ ಏಳಿಗೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಇನ್ನಿತರ ಸೌಲಭ್ಯ ಬಳಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.
ಶಾಸಕ ಎಚ್.ಪಿ. ಮಂಜುನಾಥ್, ಡಿ ದೇವರಾಜ ಅರಸು ನಿಗಮದ ಮಹದೇವಸ್ವಾಮಿ, ಸಂಘದ ಸದಸ್ಯರು ಇದ್ದರು.
ಇಂದು ಅನ್ನ ಭಾಗ್ಯ ಯೋಜನೆಗೆ ಚಾಲನೆ
ಹುಣಸೂರು: ತಾಲೂಕಿನ ಬೀಜಗನಹಳ್ಳಿ ಗ್ರಾಪಂ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು. 10 ರಂದು ಶಾಸಕ ಎಚ್.ಪಿ. ಮಂಜುನಾಥ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಅನ್ನಭಾಗ್ಯ ಯೋಜನೆಯ ಕಾರ್ಯಕ್ರಮ ಉದ್ಘಾಟಿಸುವರು. ಬೀಜಗನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ನಂತರ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರ್ಇ ಚೌಡನಾಯ್ಕ ತಿಳಿಸಿದ್ದಾರೆ.
ಬನ್ನಿಕುಪ್ಪೆಯಲ್ಲಿ ಗ್ರಾಮಸಭೆ
ಹುಣಸೂರು: ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯನ್ನು ಜು. 10ರ ಬುಧವಾರ ಆಯೋಜಿಸಿದೆ. ಜು. 10ರ ಬೆಳಗ್ಗೆ 10ಕ್ಕೆ ಮರಳಯ್ಯನಕೊಪ್ಪಲಿನ ಅರಳಿಕಟ್ಟೆಯಲ್ಲಿ, ಮಧ್ಯಾಹ್ನ 12ಕ್ಕೆ ದೊಡ್ಡೇಗೌಡನಕೊಪ್ಪಲು ಶಾಲಾ ಆವರಣ, ಮಧ್ಯಾಹ್ನ 1.30ಕ್ಕೆ ತೆಂಕಲಕೊಪ್ಪಲಿನ ಶಾಲಾ ಆವರಣ ಹಾಗೂ ಮಧ್ಯಾಹ್ನ 3ಕ್ಕೆ ಕಾಡನಕೊಪ್ಪಲಿನ ಅಂಗನವಾಡಿ ಕೇಂದ್ರದಲ್ಲಿ ಸಭೆ ಆಯೋಜಿಸಿದೆ. ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಅಧ್ಯಕ್ಷತೆ ವಹಿಸುವರು. ಸಹಾಯಕ ತೋಟಗಾರಿಕಾ ನಿರ್ದೇಶಕ ಎನ್. ಸೋಮಯ್ಯನವರು ಉಸ್ತುವಾರಿ ಅಧಿಕಾರಿಗಳಾಗಿ,ಜಿಪಂ ಸದಸ್ಯ ರಮೇಶ್ ಹಾಗೂ ತಾಪಂ ಸದಸ್ಯ ಬಿ.ಡಿ. ಪ್ರಸನ್ನಕುಮಾರ್ ಭಾಗವಹಿಸುವರು ಎಂದು ಪಿಡಿಒ ಬಿ.ಎಸ್. ರೂಪೇಶ್ ತಿಳಿಸಿದ್ದಾರೆ.