ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ: ಖಾದರ್ ಎಚ್ಚರಿಕೆ
ಕ.ಪ್ರ. ವಾರ್ತೆ, ಮೈಸೂರು, ಜು. 9
ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.
ನಗರ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪರಂಪರಾನುಗತವಾಗಿ ನಾಟಿ ವೈದ್ಯ ವೃತ್ತಿಯಲ್ಲಿ ತೊಡಗಿರುವವರನ್ನು ಹೊರತುಪಡಿಸಿ, ಅವಿದ್ಯಾವಂತ ಮತ್ತು ಆರನೇ ತರಗತಿ, ಏಳನೇ ತರಗತಿ ಅನುತ್ತೀರ್ಣರಾಗಿ ವೈದ್ಯ ವೃತ್ತಿ ಮಾಡುವುದಾಗಿ ಹೇಳಿಕೊಂಡು ತಿರುಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರೀತಿಯಿಂದ ಕಾಣಬೇಕು: ವೈದ್ಯರು ರೋಗಿಗಳನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ನಂಬಿಕೆ ಇರಬೇಕು. ಆದರೆ ಇಬ್ಬರ ನಡುವೆಯೂ ಸಂಶಯ ಇದೆ. ಆದ್ದರಿಂದ ರೋಗಿಗಳನ್ನು ವೈದ್ಯರು ಪ್ರೀತಿಯಿಂದ ಕಂಡರೆ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ವೈದ್ಯರ ಬಗ್ಗೆ ಗೌರವ ಬರುತ್ತದೆ. ಆಗ ಯಾರದ್ದೇ ತಪ್ಪಿದ್ದರೂ ಅನುಸರಿಸಿಕೊಂಡು ಹೋಗುತ್ತಾರೆ. ಇಲ್ಲವಾದರೂ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಖಾದರ್ ಹೇಳಿದರು.
ವೈದ್ಯರ ನೇಮಕ ಶೀಘ್ರ: ಶೀಘ್ರದಲ್ಲಿಯೇ ವೈದ್ಯರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಗತ್ಯವಿರುವ ಎಂಬಿಬಿಎಸ್ ವೈದ್ಯರು ಮತ್ತು ಪಿಜಿ ಮುಗಿಸಿರುವ ವೈದ್ಯರಿಗೆ ಹೆಚ್ಚಿನ ವೇತನ ನೀಡಲಾಗುವುದು. ಹೀಗೆ ನೇಮಕಗೊಂಡ ಎಲ್ಲರೂ ಗ್ರಾಮೀಣ ಪ್ರದೇಶದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸುವುದು ಕಡ್ಡಾಯ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲದೆ ವಿಭಾಗೀಯ ಮಟ್ಟದ ಸಭೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ವಿಷ ಸೇವಿಸಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಹಂದನಹಳ್ಳಿ ಗೇಟ್ ಬಳಿಯ ಪ್ರಯಾಣಿಕ ಬಸ್ ತಂಗುದಾಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರ ಪಕ್ಕದಲ್ಲಿ ಎರಡು ಕ್ರಿಮಿನಾಶಕ ಬಾಟಲಿಗಳು ಪತ್ತೆಯಾಗಿದೆ. ಚಹರೆ- 65 ವರ್ಷ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕೃಶವಾದ ಶರೀರ, ಖಾಕಿ ಬಣ್ಣದ ಜರ್ಕಿನ್, ಆಕಾಶ ನೀಲಿ ಶರ್ಟ್, ನೀಲಿ ಚೌಕುಳಿ ಡಿಸೈನ್ ಇರುವ ಲುಂಗಿ ಧರಿಸಿದ್ದಾರೆ. ಇವರ ಬಳಿಯಿದ್ದ ಬ್ಯಾಗಿನಲ್ಲಿ ನಾರಾಯಣ ಹೃದಯಾಲಯ ಆಸ್ಪತ್ರೆಯ ಕಡತವಿದ್ದು, ಅದರ ದಾಖಲಾತಿಯಲ್ಲಿ ಜಾರ್ಜ್ (65), ಬಿಳಿಕೆರೆ, ಹುಣಸೂರು ತಾಲೂಕು ಎಂದು ನಮೂದಿಸಿರುತ್ತದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 08222- 240002 ಸಂಪರ್ಕಿಸಲು ಬಿಳಿಕೆರೆ ಠಾಣೆ ಪೊಲೀಸರು ಕೋರಿದ್ದಾರೆ.