ಬಾಂಬ್ ಸ್ಫೋಟ ಖಂಡಿಸಿ ಮೌನ ಪ್ರತಿಭಟನೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜು. 9
ಬುದ್ಧಗಯಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೇಶದಲ್ಲಿನ ಬೌದ್ಧ ಮಂದಿರ ಹಾಗು ಬೌದ್ಧ ಸ್ತೂಪಕ್ಕೆ ಕೇಂದ್ರ ಸರ್ಕಾರ ಅಗತ್ಯ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ತಾಲೂಕು ಬುದ್ಧ ಧಮ್ಮ ಸಮಿತಿ ಹಾಗು ಪ್ರಗತಿಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಬುದ್ಧಗಯಾದಲ್ಲಿನ ಭಯೋತ್ಪಾದಕರ ಬಾಂಬ್ ಸ್ಫೋಟದಿಂದ ಅನೇಕ ಬೌದ್ಧ ಭಿಕ್ಷುಗಳು ಗಾಯಗೊಂಡಿದ್ದು, ಶಾಂತಿಪ್ರಿಯನಾದ ಬುದ್ಧನ ಅನುಯಾಯಿಗಳ ಮೇಲಿನ ದೌರ್ಜನ್ಯವನ್ನು ತಾಲೂಕು ಸಮಿತಿಯು ಖಂಡಿಸಿದೆ.
ಈ ಕೃತ್ಯದ ಅರಿವಿದ್ದರೂ ಬಿಹಾರ ಸರ್ಕಾರ ರಕ್ಷಣಾ ಕಾರ್ಯ ಕೈಗೊಂಡಿಲ್ಲ ಹಾಗೂ ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಈ ಕೃತ್ಯವನ್ನು ಎಸಗಿದ ಭಯೋತ್ಪಾದಕರನ್ನು ಕೂಡಲೆ ಬಂಧಿಸಬೇಕು ಹಾಗೂ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೊಡ್ಡಸಿದ್ದು, ಸೋಮೇಶ್, ದೇವರಾಜ್, ಶಿವರಾಜ್, ಪ್ರಕಾಶ್, ರಾಜು, ಪ್ರಕಾಶ್, ಕುಮಾರ, ಚಾ. ಶಿವಕುಮಾರ, ಸಣ್ಣ ಕುಮಾರ್ ಇದ್ದರು.