ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಂಪಾಪುರ ಮೀನುಗಾರರ ಸಹಕಾರ ಸಂಘದಲ್ಲಿ ಅಕ್ರಮ

Rashmi Kasaragodu
Updated On : 10 Jul 2013, 1:32 am

ಕ.ಪ್ರ.ವಾರ್ತೆ   ಕೆ.ಆರ್. ನಗರ   ಜು. 9
ಹಂಪಾಪುರ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಹಿತ ಕಾಯದೆ ಅಕ್ರಮದಲ್ಲಿ ತೊಡಗಿದ್ದು, ಪದಾಧಿಕಾರಿಗಳು ಲಕ್ಷಾಂತರ ರು.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಘದ ನಿರ್ದೇಶಕ ಎಚ್.ಕೆ. ಪ್ರಕಾಶ್, ಕನ್ನಂಬಾಡಿ ಮೀನುಗಾರರ ಸಂಘದ ಅಧ್ಯಕ್ಷ ರಾಜು, ಮುಖಂಡ ರಮೇಶ್ ಆರೋಪಿಸಿದರು.
ಸಂಘದ ಸದಸ್ಯರಾಗಿದ್ದು, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವವರ ಕ್ಷೇಮಾಭಿವೃದ್ಧಿಗಾಗಿ ಸಬ್ಸಿಡಿ ರೂಪದಲ್ಲಿ ಪ್ರತಿ ವರ್ಷ ಸರ್ಕಾರ ಒಂದು ಸಂಘಕ್ಕೆ ತಲಾ ಐದು ಲಕ್ಷ ರು. ಹಣವನ್ನು ನೀಡುತ್ತಾ ಬಂದಿದೆ. ಆದರೆ, ಈ ಹಣ ಸದಸ್ಯರ ಅಭ್ಯುದಯಕ್ಕೆ ಬಳಕೆಯಾಗಿಲ್ಲ. ಇದರ ಲೆಕ್ಕವನ್ನು ಸದಸ್ಯರಿಗೆ ಸಂಘದವರು ನೀಡುತ್ತಿಲ್ಲ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹಂಪಾಪುರದ ಮೀನುಗಾರರ ಸಹಕಾರ ಸಂಘ ಮತ್ತು ಕೆಆರ್ಎಸ್ ಜಲಾಶಯದ ಸಂಘಗಳ ನಡುವಿನ ಒಪ್ಪಂದದಂತೆ ಈ ಎರಡು ಸಂಘಗಳ ಸದಸ್ಯ ಮೀನುಗಾರರು ತಮಗೆ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮಾಡುವಂತೆ ನಿರ್ಧರಿಸಲಾಗಿದ್ದು, ಮೀನುಗಾರರು ಪ್ರತಿನಿತ್ಯ ಮೀನು ಹಿಡಿದು ಸಂಘದವರಿಗೆ ಪ್ರತಿ ಕೆಜಿಗೆ 26 ಗಳಂತೆ ನೀಡುತ್ತಿದ್ದು, ಇದನ್ನು 80ಕ್ಕೆ ಮಾರಾಟ ಮಾಡುವ ಸಂಘದವರು ಲಾಭದ ಹಣವನ್ನು ನುಂಗಿ ಹಾಕಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂಬಂಧ ತಾವುಗಳು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರಿಗೆ ದೂರಿದ ಹಿನ್ನೆಲೆ ಸಂಘದ ಗುತ್ತಿಗೆಯನ್ನು ನವೀಕರಣ ಮಾಡದಂತೆ ತಡೆ ಹಿಡಿಯಲಾಗಿದ್ದು, ಇದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ಮುಂದೆ ಮೀನುಗಾರರಿಗೆ ವೈಯಕ್ತಿಕವಾಗಿ ಲೈಸೆನ್ಸ್ ನೀಡಿ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಗಿರಿನಾಯಕ, ಮಂದೀಪ್, ಪಿ. ಮುರುಗೇಶ್, ಮಾದಪ್ಪ, ಕೆಂಪೇಗೌಡ, ಮಾದನಾಯ್ಕ, ಕುಮಾರ್, ಗಣೇಶ್, ಪ್ರಭಾಕರ್, ತಾಂಡು, ಶಿವು, ರವಿ, ಅಣ್ಣಯ್ಯ, ರಾಜನಾಯಕ, ರಂಗಸ್ವಾಮಿ, ಮಾಣಿಕ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement