ಹದಿನಾರು ಗ್ರಾಮ ನಿವಾಸಿ ನಾಪತ್ತೆ
ಮೈಸೂರು: ನಂಜನಗೂಡು ತಾಲೂಕು ಹದಿನಾರು ಗ್ರಾಮದ ನಿವಾಸಿ ಲೇ. ಮಾಯಿಗಯ್ಯ ಎಂಬವರ ಪುತ್ರ ಸಿದ್ದಯ್ಯ (75) ಜು.1 ರಿಂದ ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ತಮ್ಮ ತಂದೆಯನ್ನು ಪತ್ತೆ ಮಾಡಿಕೊಡುವಂತೆ ಮಗ ಮಹೇಶ್ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ಮೈಬಣ್ಣ, ಗುಂಡು ಮುಖ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಹೇಶ್ ಮೊ. 9620715762 ಅಥವಾ ದೂ. 08221- 226259 ಸಂಪರ್ಕಿಸಲು ನಂಜನಗೂಡು ಗ್ರಾಮಾಂತರ ಠಾಣೆ ಎಸ್ಐ ಎಂ. ಹನುಮಂತರಾಜ್ ಕೋರಿದ್ದಾರೆ.
ವರದಕ್ಷಿಣೆ ಕಿರುಕುಳ: ಶಿಕ್ಷಕಿ ಆತ್ಮಹತ್ಯೆ
ಮೈಸೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಶಿಕ್ಷಕಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಅಗ್ರಹಾರ ನಿವಾಸಿ ಶಿವಕುಮಾರ್ ಎಂಬವರ ಪತ್ನಿ ವಿಶಾಲಕ್ಷಿ (27) ಆತ್ಮಹತ್ಯೆಗೆ ಶರಣಾದವರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ದೊಡ್ಡಕಾಡನೂರಿನ ವಿಶಾಲಕ್ಷಿ ಅವರಿಗೆ 5 ವರ್ಷಗಳ ಹಿಂದೆ ಶಿವಕುಮಾರ್ ಜೊತೆಗೆ ವಿವಾಹವಾಗಿದ್ದು, 4 ವರ್ಷದ ಮಗ ಇದ್ದಾನೆ. ಶ್ರೀಕಾಂತ ಶಾಲೆಯಲ್ಲಿ ವಿಶಾಲಾಕ್ಷಿ ಶಿಕ್ಷಕಿಯಾಗಿದ್ದರು. ಪತಿ ಮತ್ತು ಕುಟುಂಬದ ಸದಸ್ಯರ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಶಾಲಕ್ಷಿ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಸಿ.ಡಿ. ಜಗದೀಶ್ ಮತ್ತು ಸಿಬ್ಬಂದಿ ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.
ಇಬ್ಬರು ಆರ್ಐ ಅಮಾನತು
ಮೈಸೂರು: ಕಸದ ತೊಟ್ಟಿಯಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಪಾಲಿಕೆ ಇಬ್ಬರು ಕಂದಾಯ ನಿರೀಕ್ಷಕರನ್ನು (ಆರ್ಐ) ಅಮಾನತುಗೊಳಿಸಲಾಗಿದೆ.
ಆರ್ಐಗಳಾದ ಯೋಗೇಂದ್ರ ಮತ್ತು ಮಂಜುನಾಥ್ ಎಂಬವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ. ನ್ಯಾಯಾಲಯದ ಎದುರಿನ ಉದ್ಯಾನವನದ ಪಕ್ಕದಲ್ಲಿ ಇರುವ ಕಸದ ತೊಟ್ಟಿಯಲ್ಲಿ ಭಾನುವಾರ 200ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆಯಾಗಿತ್ತು. ಈ ವಿಷಯ ತಿಳಿದು ಜಿಲ್ಲಾಧಿಕಾರಿ ಡಾ. ರಾಮೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುವಂತೆ ಪಾಲಿಕೆಗೆ ಸೂಚಿಸಿದ್ದರು.
ಗೃಹಿಣಿ ನೇಣಿಗೆ ಶರಣು
ಮೈಸೂರು: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಶಾರದಾದೇವಿನಗರ ನಿವಾಸಿ ನವೀನ್ ಎಂಬವರ ಪತ್ನಿ ಸುನಿತಾ (24) ಆತ್ಮಹತ್ಯೆಗೆ ಶರಣಾದವರು. ಇವರಿಗೆ ಎರಡೂವರೆ ವರ್ಷದ ಮಗ ಇದ್ದಾನೆ. ಸುನಿತಾ ಮನೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಸ್ಥಳಕ್ಕೆ ತಹಸೀಲ್ದಾರ್ ನವೀನ್ ಜೋಸೆಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚರಂಡಿಗೆ ಬಿದ್ದು ವ್ಯಕ್ತಿ ಸಾವು
ಮೈಸೂರು: ಕುಡಿದ ಅಮಲಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಜನತಾನಗರ ನಿವಾಸಿ ಹಾಗೂ ಕಾಂಗ್ರೆಸ್ ಮುಖಂಡ ಮೀಸೆ ಮರಿಯಪ್ಪ ಎಂಬವರ ಪುತ್ರ ರವಿ (40) ಮೃತಪಟ್ಟವರು. ಇವರು ಕುಡಿದ ಅಮಲಿನಲ್ಲಿ ಟಿ.ಕೆ. ಬಡಾವಣೆ ಗಣೇಶ್ ಬಂಡಾರ್ ಬಳಿಯಿರುವ ಚರಂಡಿಗೆ ಬಿದ್ದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರವಿಯನ್ನು ಹೊರಕ್ಕೆ ತೆಗೆದಿದ್ದಾರೆ. ವೈದ್ಯರ ಪರಿಶೀಲನೆ ಬಳಿಕ ರವಿ ಮೃತಪಟ್ಟಿರುವುದು ದೃಢಪಟ್ಟಿದೆ. ಸರಸ್ವತಿಪುರಂ ಠಾಣೆಯ ಇನ್ಸ್ಪೆಕ್ಟರ್ ಎನ್.ಎಸ್. ಚಂದ್ರಶೇಖರ್, ಎಸ್ಐ ತಿಮ್ಮರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ ನಡೆಸಿ 2.50 ಲಕ್ಷ ದರೋಡೆ
ಮೈಸೂರು: ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ 2.50 ಲಕ್ಷ ನಗದು ಹಾಗೂ ದ್ವಿಚಕ್ರವಾಹನ ಕಸಿದುಕೊಂಡು ಹೋಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಯಾದವಗಿರಿ ನಿವಾಸಿ ಪ್ರದೀಪ್ ಹಣ ಕಳೆದುಕೊಂಡವರು. ಇವರು ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ಮದ್ಯದಂಗಡಿ ನಡೆಸುತ್ತಿದ್ದು, ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಮೇದರ್ ಬ್ಲಾಕ್ ರೇಲ್ವೆ ಅಂಡರ್ ಬ್ರಿಡ್ಜ್ ಬಳಿ 4-5 ಮಂದಿ ಹಲ್ಲೆ ನಡೆಸಿ ದೋಚಿದ್ದಾರೆ.