'ಉದ್ಯೋಗ ಕಾಯಂ ಮಾಡಿ'
ಕ.ಪ್ರ.ವಾರ್ತೆ ಮೈಸೂರು ಜು. 10
ವಿವಿಧ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವದರು (ಸಿಐಟಿಯು ಸಂಯೋಜಿತ) ಬುಧವಾರ ಕರಾಳ ದಿನಾಚರಣೆ ಪ್ರತಿಭಟನೆ ಹಮ್ಮಿಕೊಂಡಿದ್ದರು.
ನಗರದ ಗನ್ಹೌಸ್ ವೃತ್ತದಿಂದ ಮೆರವಣಿಗೆ ಹೊರಟ ಸಾವಿರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಕಪ್ಪು ಬಟ್ಟೆ ಧರಿಸಿದ್ದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಖಾಸಗಿ ಪಾಲುದಾರಿಕೆ ಹೆಸರಿನಲ್ಲಿ ಖಾಸಗಿಕರಣ ಮಾಡುತ್ತಿರುವುದು ಸರಿಯಲ್ಲ. ಈ ಯೋಜನೆಯನ್ನು ಕ್ರಮಬದ್ಧಗೊಳಿಸಿ, ಅದನ್ನೊಂದು ಇಲಾಖೆಯಾಗಿಸಬೇಕು. ಅಂಗನವಾಡಿ ಖಾಸಗಿಕರಣ ಮಾಡಬಾರದು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರನ್ನು ಸರ್ಕಾರದ 3 ಮತ್ತು 4ನೇ ದರ್ಜೆ ನೌಕರನ್ನಾಗಿ ಕ್ರಮಬದ್ಧಗೊಳಿಸಿ, ಗೌರವ ವೇತನವನ್ನು ಕ್ರಮವಾಗಿ 15,000 ಮತ್ತು 10,000 ಕ್ಕೆ ಏರಿಸಬೇಕು. ಎಲ್ಲರಿಗೂ ಕನಿಷ್ಠ ನಿವೃತ್ತಿ ವೇತನ, ಭವಿಷ್ಯ ನಿಧಿ ಇತ್ಯಾದಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ, ಜಿಲ್ಲಾಧ್ಯಕ್ಷೆ ಕಾವೇರಮ್ಮ, ಮುಖಂಡರಾದ ಜಿ. ಶಕುಂತಲಾ, ಎಚ್.ಎಸ್. ಸುನಂದ, ಕೆ. ಬಸವರಾಜು, ಬಲರಾಮ್, ಡಿ. ಜಗನ್ನಾಥ್, ಮಂಗಳಗೌರಮ್ಮ, ಹಸೀನಾ ಬಾನು, ರಾಜಮ್ಮಣಿ, ರಾಜೇಶ್ವರಿ ಇದ್ದರು.