ಜ್ಯೋತಿ ಬಸು ಕಾರ್ಮಿಕರ ಧೀಮಂತ ನಾಯಕ
ಕ.ಪ್ರ.ವಾರ್ತೆ ಮೈಸೂರು ಜು. 10
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಕಾರ್ಮಿಕರ ಹೋರಾಟದ ಧೀಮಂತ ನಾಯಕರಾಗಿದ್ದರು ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷ ಎ.ಕೆ. ಪದ್ಮನಾಭ್ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯು ಬುಧವಾರ ನಗರದ ವರ್ಧಮಾನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜ್ಯೋತಿಬಸು ಜನ್ಮ ಶತಾಬ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಶ್ಚಿಮ ಬಂಗಾಳದ ಮಧ್ಯಮ ವರ್ಗದಲ್ಲಿ ಜನಿಸಿದ ಬಸು ಅವರು ಜೀವಿತಾವಧಿಯವರೆಗೂ ಕಾರ್ಮಿಕ ಹೋರಾಟಕ್ಕೆ ಶಕ್ತಿಯಾಗಿದ್ದರು. ಸುಮಾರು 70 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದುಕೊಂಡು 23 ವರ್ಷಗಳ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಮೂಲಕ ದಾಖಲೆ ಮೆರೆದರು.
ಮೊದಲಿಗೆ ರೇಲ್ವೆ ಕಾರ್ಮಿಕರನ್ನು ಸಂಘಟಿಸಿ ಸಂಘ ಕಟ್ಟಿದರು. ಬ್ರಿಟಿಷ್ ಸರ್ಕಾರದ ಅಸೆಂಬ್ಲಿಗೆ ರೇಲ್ವೆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಗಳಲ್ಲಿ ಅಜಯ್ ಮುಖರ್ಜಿ ಹಾಗೂ ಜ್ಯೋತಿ ಬಸು ಪ್ರತ್ಯೇಕ ಕಾರ್ಮಿಕ ಸಂಘಟನೆ ಮೂಲಕ ಆಯ್ಕೆಯಾಗಿ ಹೋರಾಟ ನಡೆಸಿದರು. 1970 ರಿಂದ 77 ರವರೆಗಿನ ಪ್ರಮುಖ ಕಾಲಘಟ್ಟದಲ್ಲಿ ದೇಶದಲ್ಲಿ ಇನ್ನಿಲ್ಲದ ಬದಲಾವಣೆಗಳಾದವು. ತುರ್ತು ಪರಿಸ್ಥಿತಿಯಯ ಬಳಿಕ ಜ್ಯೋತಿ ಬಸು ನಾಯಕತ್ವಕ್ಕೆ ಮಹತ್ವ ಬಂದಿತು. ಆಗ ಅವರ ಮುಂದಾಳತ್ವದಲ್ಲಿ 1980ರಲ್ಲಿ ಸಿಐಟಿಯು ಜನ್ಮ ತಳೆದು ಇಂದಿಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜ್ಯೋತಿ ಬಸು ಅವರ ಹೋರಾಟ ಹತ್ತಿಕ್ಕುವ ಪ್ರಯತ್ನ ಆಗಾಗ ನಡೆಯುತ್ತಿತ್ತು. ಒಂದು ದಿನ ಜ್ಯೋತಿಬಸು ರೈಲಿನಿಂದ ಇಳಿಯಬೇಕಾದರೆ ಅವರ ಮೇಲೆ ಗುಂಡು ಹಾರಿಸಲಾಯಿತು. ಆದರೆ, ಎಲ್ಐಸಿ ಪ್ರತಿನಿಧಿಯೊಬ್ಬ ಗುಂಡಿಗೆ ಎದೆಯೊಡ್ಡಿದ್ದರಿಂದ ಬಸು ಉಳಿದುಕೊಂಡರೆ ಒಂದು ವೇಳೆ ಅವರು ಅಸುನೀಗಿದ್ದರೆ ಕಾರ್ಮಿಕ ಸಂಘಟನೆ ಉಳಿಯುತ್ತಿರಲಿಲ್ಲ. ಜ್ಯೋತಿಬಸು ಕಾಲವಾಗುವವರೆಗೂ ಸಿಐಟಿಯುನ ರಾಷ್ಟ್ರ ಉಪಾಧ್ಯಕ್ಷರಾಗಿಯೇ ಹೋರಾಟಕ್ಕೆ ಜೀವ ತುಂಬುತ್ತಿದ್ದರು ಎದು ಪದ್ಮನಾಭ್ ಸ್ಮರಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ. ಬಾಲಾಜಿರಾವ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಪದಾಧಿಕಾರಿಗಳಾದ ಕೆ.ಎನ್. ಉಮೇಶ್, ಕೆ. ಬಸವರಾಜು, ಜಿ. ಜಯರಾಂ, ಎಂ. ಮೂರ್ತಿ, ಎನ್. ಭಾಸ್ಕರ್, ಎಸ್.ಬಿ. ಬಲರಾಂ, ಎಸ್.ಎಸ್. ನಾಗೇಶ್, ಪ್ರಸನ್ನಕುಮಾರ್, ಸುನಂದ ಇದ್ದರು.