ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈಲಿಗೆ ಸಿಕ್ಕಿ ಇಬ್ಬರು ಯುವಕರು ಸಾವು

Rashmi Kasaragodu
Updated On : 11 Jul 2013, 12:57 pm

ಮೈಸೂರು: ಇಬ್ಬರು ಯುವಕರು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಮೈಸೂರು- ಮಂಡ್ಯ ಜಿಲ್ಲೆಗಳ ಗಡಿ ಭಾಗದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆಆರ್ಎಸ್ ಪಂಚಾಲಬೋವಿ ಕಾಲೋನಿ ನಿವಾಸಿಗಳಾದ ವೆಂಕಟಯ್ಯ ಎಂಬವರ ಪುತ್ರ ಶ್ರೀನಿವಾಸ್ (20) ಮತ್ತು ಗುರುವಯ್ಯ ಎಂಬವರ ಪುತ್ರ ಭರತ್ (19) ಮೃತಪಟ್ಟವರು. ಶ್ರೀನಿವಾಸ್ ಗಾರೆ ಕೆಲಸ ಮಾಡಿಕೊಂಡಿದ್ದು, ಭರತ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಕೆಆರ್ಎಸ್ಗೆ ಸಮೀಪದಲ್ಲಿರುವ ಬೆಳಗೊಳ- ಸಾಗರಕಟ್ಟೆ ನಡುವಿನ ಮಾದೇಗೌಡನಕೊಪ್ಪಲು ಎಂಬಲ್ಲಿ ಈ ಇಬ್ಬರ ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಇವರು ಬಹಿರ್ದೇಸೆಗೆ ಹೋಗಿದ್ದ ವೇಳೆ ರೈಲಿಗೆ ಸಿಕ್ಕಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಇನ್ಸ್ಪೆಕ್ಟರ್ ಗೋಪಾಲಕೃಷ್ಣ, ಎಸ್ಐ ನರಸಿಂಹಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಮೈಸೂರು ರೇಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬಾಲಕರು ನಾಪತ್ತೆ
ಮೈಸೂರು: ಗೌಸಿಯಾನಗರ ರೇಣುಕಾದೇವಿ ಬ್ಲಾಕ್ ನಿವಾಸಿಗಳಾದ ಬಾಬುರಾವ್ ಎಂಬವರ ಪುತ್ರ ಅನಿಲ್ಕುಮಾರ್ (16) ಮತ್ತು ಕುಮಾರ್ ಎಂಬವರ ಪುತ್ರ ರವಿಕುಮಾರ್ (15) ನಾಪತ್ತೆಯಾಗಿದ್ದಾರೆ. ಜು. 7ರ ರಾತ್ರಿ ಅನಿಲ್ಕುಮಾರ್ ಮತ್ತು ಪಕ್ಕದ ಮನೆಯ ರವಿಕುಮಾರ್ ಕರಗ ಉತ್ಸವ ನೋಡಲು ಹೋದವರು ಕಾಣೆಯಾಗಿದ್ದಾರೆ. ಅನಿಲ್ ಚಹರೆ- 4.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು. ರವಿಕುಮಾರ್ ಚಹರೆ- 4.6 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು. ಇಬ್ಬರು ಕನ್ನಡ ಮಾತನಾಡುತ್ತಾರೆ. ದೂ. 0821- 2418309, 509 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಎನ್.ಆರ್. ಮೊಹಲ್ಲಾ ಗಣೇಶ ದೇವಸ್ಥಾನ ರಸ್ತೆ ನಿವಾಸಿ ಹಾಗೂ ಖಾಸಗಿ ಶಾಲೆ ಶಿಕ್ಷಕ ರಾಜೇಶ್ ಎಂಬವರ ಪತ್ನಿ ಚಂದ್ರಕಲಾ (31) ಆತ್ಮಹತ್ಯೆಗೆ ಶರಣಾದವರು. ಇವರ ಮದುವೆಯಾಗಿ 8 ವರ್ಷ ಕಳೆದಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಚಂದ್ರಕಲಾ ಪತ್ರ ಬರೆದಿಟ್ಟಿದ್ದಾರೆ. ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ದರೋಡೆ
ಮೈಸೂರು: ತೋಟದ ಮನೆಯಲ್ಲಿ ವಾಸವಾಗಿದ್ದ ದಂಪತಿಗೆ ಮೂವರು ಅಪರಿಚಿತರು ಚಾಕು ತೋರಿಸಿ ಹೆದರಿಸಿ 1 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ತಾಲೂಕಿನ ಕುಮಾರಬೀಡು ಗ್ರಾಮದಲ್ಲಿ ನಡೆದಿದೆ. ಅನ್ನಮ್ಮ ಅಂಥೋಣಿ ದಂಪತಿ ವಾಸವಾಗಿದ್ದ ಫಾರಂ ಹೌಸ್ಗೆ ಸೋಮವಾರ ರಾತ್ರಿ ವೇಳೆ ಮೂವರು ಅಪರಿಚಿತರು ಚಾಕು ತೋರಿಸಿ 1 ಲಕ್ಷ ಮೌಲ್ಯದ ಚಿನ್ನದ ಬಳೆ, ಸರ, 2 ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಾಘವಾಂಕನದಲ್ಲ, ಸಿದ್ದನಂಜೇಶನ ಕೃತಿ ಭಾಗ: ಡಾ. ಕಲಬುರ್ಗಿ
ಮೈಸೂರು: ಶರಭ ಚಾರಿತ್ರ್ಯ ಮತ್ತು ಹರಿಹರ ಮಹತ್ವ ರಾಘವಾಂಕನ ಸ್ವತಂತ್ರ ಕೃತಿಗಳೆಂದು ಜಗಲೂರು ಎಂ.ವೀರಭದ್ರಯ್ಯಸ್ವಾಮಿ ಅವರು ಹೇಳಿಕೆ ಕುರಿತು ಹಿರಿಯ ವಿದ್ವಾಂಸ ಡಾ.ಎಂ.ಎಂ. ಕಲಬುರ್ಗಿ ಪ್ರತಿಕ್ರಿಯಿಸಿದ್ದಾರೆ. ವೀರಭದ್ರಯ್ಯಸ್ವಾಮಿ ಅವರ ಪ್ರಯತ್ನದ ಬಗ್ಗೆ ಮೆಚ್ಚುಗೆ ಇದೆ. ಆದರೆ, ಕೃತಿಗಳಲ್ಲಿನ ಪದ್ಯಗಳು ಸಿದ್ದನಂಜೇಶನ ರಾಘವಾಂಕ ಚರಿತ್ರೆಯ ಪದ್ಯಗಳನ್ನು ಹೋಲುವುದರಿಂದ ಇವು ರಾಘವಾಂಕನ ಸ್ವತಂತ್ರ ಕೃತಿಗಳೆಂದು ಹೇಳಲಾಗದು ಎಂದು ತಿಳಿಸಿರುವುದಾಗಿ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ. ಸಾಂಬಶಿವಯ್ಯ ಹೇಳಿದ್ದಾರೆ.


ಸರ ಅಪಹರಣಕಾರನ ಸೆರೆ
ಮೈಸೂರು: ಮಹಿಳೆಯೊಬ್ಬರ ಸರ ಅಪಹರಿಸಿಕೊಂಡು ಓಡಿ ಹೋಗುತ್ತಿದ್ದ ಆರೋಪಿಯನ್ನು ಎನ್.ಆರ್. ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ರಾಜೀವ್ನಗರ ರಂಜಿನ್ ಖಾನ್ (23) ಬಂಧಿತ ಆರೋಪಿ. ಈತನು ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ಲೀಲಾವತಿ ಎಂಬವರು ಮನೆಯ ಬಳಿ ಹೋಗುತ್ತಿದ್ದಾಗ ರಂಜಿನ್ ಸರ ಕಸಿದುಕೊಳ್ಳಲು ಯತ್ನಿಸಿದ, ಈ ವೇಳೆ ಲೀಲಾವತಿ ಅವರು ಕಿರಿಚುಕೊಂಡಿದ್ದರಿಂದ ಗಸ್ತಿನಲ್ಲಿದ್ದ ಎನ್.ಆರ್. ಠಾಣೆ ಪೊಲೀಸರಾದ ಸುರೇಶ್ ಮತ್ತು ಇಲಿಯಾಜ್ ಆರೋಪಿಯನ್ನು ಬೆನ್ನಟ್ಟಿ ಹಿಡಿದ್ದಾರೆ.


ಗುರುಪುರ ಶಿಬಿರಕ್ಕೆ ದಲೈಲಾಮಾ ಭೇಟಿ
ಮೈಸೂರು: ಟಿಬೆಟಿಯನ್ನರ ಧರ್ಮಗುರುಗಳಾದ ದಲೈಲಾಮ ಅವರು ಜು. 12 ರಿಂದ 16 ರವರೆಗೆ ಹುಣಸೂರಿನ ಗುರುಪುರ ಟಿಬೆಟಿನ್ ನಿರಾಶ್ರಿತ ತಾಣಕ್ಕೆ ಹಾಗೂ ಜೋಂಕರ್ ಚೋಡೆ ಮತ್ತು ಗುಡ್ಮೆ ತಾಂತ್ರಿಕ ವಿವಿಗಳಿಗೆ ಭೇಟಿ ನೀಡುವರು ಎಂದು ಗುರುಪುರ ರಬ್ಜೆಲಿಂಗ್ ಟಿಬೆಟನ್ ಸೆಟ್ಲ್ಮೆಂಟ್ ಆಫೀಸ್ನ ಯಷಿ ಚೋಡೆನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement