ಹೌದು ಸ್ವಾಮಿ, ಇದು ವಿಶೇಷ ಮಕ್ಕಳ ನರ್ಸರಿ!
ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಜು. 10
ಲೋಕದ ಪರಿಜ್ಞಾನವೇ ಇಲ್ಲ ಎಂಬಂತೆ ವರ್ತಿಸುವ ವಿಶೇಷ ಮಕ್ಕಳಲ್ಲಿ (ಬುದ್ಧಿಮಾಂದ್ಯ ಮಕ್ಕಳ) ಅಡಗಿರುವ ಸೂಪ್ತ ಪ್ರತಿಭೆ ಹೊರತೆಗೆಯಲು ಮುಂದಾಗಿರುವ ಶಿಕ್ಷಣ ಸಂಸ್ಥೆಯೊಂದು ಅವರಿಂದ ಹೈಟೆಕ್ ನರ್ಸರಿಯನ್ನು ಆರಂಭಿಸಿದೆ.
ಗೋಕುಲಂ 2ನೇ ಹಂತದಲ್ಲಿರುವ ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರದಲ್ಲಿ ಹಸಿರು ಮನೆ ಹೈಟೆಕ್ ನರ್ಸರಿ ಆರಂಭಿಸಲಾಗಿದ್ದು, ಬುಧವಾರ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಧರ್ಮಪತ್ನಿ ಡಾ. ಗೀತಾ ಮಹದೇವಪ್ರಸಾದ್ ಹಾಗೂ ಸುಜಾತಾ ವೆಂಕಟರಾಜು ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಯೋಜನೆ: ಒಂಟಿಕೊಪ್ಪಲಿನಲ್ಲಿರುವ ಮಾತೃ ಮಂಡಳಿ ಶಿಕ್ಷಣ ಸಂಸ್ಥೆಯ ವಜ್ರ ಮಹೋತ್ಸವ ಸ್ಮರಣಾರ್ಥವಾಗಿ 1995ರಲ್ಲಿ ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ ಆರಂಭಿಸಲಾಯಿತು. ಮೊದಲಿಗೆ ಸಾಮಾನ್ಯ ಮಕ್ಕಳು ಹಾಗೂ ವಿಶೇಷ ಮಕ್ಕಳನ್ನು ಒಟ್ಟುಗೂಡಿಸಿ ಏಕತೆ ಮೂಡಿಸಲು ಪ್ರಯತ್ನಿಸಿದರೂ ಅದು ಕೈಗೂಡಲಿಲ್ಲ. ಕೊನೆಗೆ ಈ ಶಾಲೆಯನ್ನು ವಿಶೇಷ ಮಕ್ಕಳಿಗೆ ಸೀಮಿತಗೊಳಿಸಿ ಅವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಯಯೋಜನೆ ರೂಪಿಸಲಾಯಿತು.
ಗಾಂಧಿವಾದಿ ಜಿ.ಎಸ್. ಸುಬ್ರಹ್ಮಣ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಉಪಾಧ್ಯಕ್ಷರಾದ ವಿಜಯಲಕ್ಷ್ಮೀ ಅರಸ್, ಕಾರ್ಯದರ್ಶಿ ವಿಜಯಲಕ್ಷ್ಮೀ, ಕೋಶಾಧ್ಯಕ್ಷೆ ವಿಜಯಲಕ್ಷ್ಮೀ ಭಾಗವತ್, ಸಂಯೋಜಕರಾದ ಲತಾ ಮೂರ್ತಿ ಹಗಲಿರುಳು ದುಡಿಯುತ್ತಿದ್ದಾರೆ.
ಆದಾಯ: ಕಳೆದ 18 ವರ್ಷಗಳಿಂದ ವಿಶೇಷ ಮಕ್ಕಳಿಗೆ ಅಕ್ಷರ ಜ್ಞಾನ, ಬಣ್ಣ ಗುರುತಿಸುವ ಸಾಮರ್ಥ್ಯ, ನೃತ್ಯ ಕಲಿಕೆ, ಯೋಗ ಮುಂತಾದವನ್ನು ಹೇಳಿಕೊಡಲಾಗುತ್ತದೆ. ಹಾಗೆ ಮಕ್ಕಳ ಸ್ವಸಾಮರ್ಥ್ಯ ಹೆಚ್ಚಿಸಲು ಮೇಣದ ಬತ್ತಿ, ಪೇಪರ್ ಬ್ಯಾಗ್, ಫಿನಾಯಿಲ್ ತಯಾರಿಸುವುದನ್ನು ಹೇಳಿಕೊಡಲಾಗುತ್ತಿತ್ತು. ಅವರು ಪರಿಸರದೊಂದಿಗೆ ಬೆರೆಯಲು ಗಾರ್ಡನ್ ಪರಿಚಯಿಸಲು ಮುಂದಾದ ಸಂಸ್ಥೆ ಅದರಿಂದಲೆ ಆದಾಯ ಗಳಿಸುವ ಬಗೆಯನ್ನು ಮಕ್ಕಳಿಗೆ ತೋರಿಸಿಕೊಟ್ಟಿದೆ.
ನಿಮಗೂ ಸಸಿ ಬೇಕೆ?
ಸಂಸ್ಥೆಯವರ ಈ ಸಾಹಸಕ್ಕೆ ಫ್ರೆಂಡ್ಶಿಪ್ ಆ್ಯಂಡ್ ಟ್ಯಾಲೆಂಟ್ ಅಸೋಸಿಯೇಷನ್ (ಎಫ್ಎಟಿಎ)ನ ವಿಜಿ ಗೋಪಿನಾಥ್ ಹಾಗೂ ಜಯಪುರದಲ್ಲಿರುವ ಮೈತ್ರಿ ಹೈಟೆಕ್ ನರ್ಸರಿಯ ಜಗದೀಶ್ ರಾಜ್ ಅರಸ್ ಸಹಕಾರ ನೀಡಿದ್ದಾರೆ. ನರ್ಸರಿಯಲ್ಲಿ ತರಕಾರಿ ಸಸಿಗಳು, ಹಣ್ಣಿನ ಗಿಡಗಳು, ಅಲಂಕಾರಿಕ ಹೂವಿನ ಸಸಿಗಳು ಮುಂತಾದ ಗಿಡಗಳನ್ನು ಬೆಳೆಸಲಾಗುತ್ತದೆ. ಖರೀದಿಸಲಿಚ್ಛಿಸುವವರು ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ, ನಂ. 382,13, 2ನೇ ಹಂತ, ಗೋಕುಲಂ, ಮೈಸೂರು- 570 002. ದೂ. 0821-2513403, ಮೊ. 9945615818 ಸಂಪರ್ಕಿಸಬಹುದು.