ಕಪಿಲೆಯಲ್ಲಿ ಈಜಿದ ಯುವಕರು
ಕ.ಪ್ರ.ವಾರ್ತೆ ನಂಜನಗೂಡು ಜು. 11
ವರುಣನ ಕೃಪೆಯಿಂದ ಜೀವನದಿ ಕಪಿಲೆ ತುಂಬಿ ಹರಿಯುತ್ತಿದ್ದಾಳೆ. ನದಿಯ ಅಬ್ಬರ ಕಂಡು ದಡದ ನಿವಾಸಿಗಳಿಗೆ ಆತಂಕ ಒಂದೆಡೆಯಾದರೆ, ತುಂಬಿ ಹರಿಯುವ ನದಿಯಲ್ಲಿ ಈಜಿ ಸಾಹಸ ಮೆರೆಯುವ ಹುಮ್ಮಸ್ಸು ಯುವಕರಿಗೆ. ಇಲ್ಲಿನ ಒಕ್ಕಲಗೇರಿ ಬೀದಿಯ ಐವರು ಯುವಕರು ಉಕ್ಕಿ ಹರಿಯುವ ಕಪಿಲೆಯಲ್ಲಿ ಡೈವ್ ಬಿದ್ದು, ಸುಮಾರು 30 ನಿಮಿಷ ಈಜಾಡಿ ಸಾಹಸ ಮೆರೆದರು. ಮೈಸೂರು- ಊಟಿ ರಸ್ತೆಯಲ್ಲಿನ ದೇವರಾಜ ಅರಸು ದೊಡ್ಡ ಸೇತುವೆಯಿಂದ ಭರತ್, ಶ್ರೀಧರ್, ಶರಣ್, ಸಂದೀಪ್, ಅನು ಎಂಬ ಯುವಕರು ನದಿಗೆ ಹಾರಿ ಸುಮಾರು 2 ಕಿ.ಮೀ ಉದ್ದ ಈಜುತ್ತಾ ಮಣಿಕರ್ಣಿಕಾ ಘಟ್ಟದಲ್ಲಿ ವಿಶ್ರಾಂತಿ ಪಡೆದರು. ಸಾಹಸ ನೋಡಲು ಜನರು ಕುತೂಹಲದಿಂದ ನೆರೆದಿದ್ದರು.