ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಬ್ಬು ಬಾಕಿ: 2 ದಿನದಲ್ಲಿ ನಿರ್ಧಾರ ಕೈಗೊಳ್ಳಲು ಡಿಸಿ ಸೂಚನೆ

Rashmi Kasaragodu
Updated On : 12 Jul 2013, 12:10 pm

ಕ.ಪ್ರ.ವಾರ್ತೆ   ಮೈಸೂರು   ಜು. 11
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಎರಡು ವರ್ಷದ ಬಾಕಿ ಹಣದ ಬಗ್ಗೆ ಎರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಮೇಗೌಡ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಗುರುವಾರ ನಡೆದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕಾರ್ಖಾನೆಯ ಮಾಲೀಕರಿಗೆ ಹಳೆಯ ಬಾಕಿ ಪಾವತಿ ಬಗ್ಗೆ ಸಕಾರಾತ್ಮಕ ನಿರ್ಣಯ ಪ್ರಕಟಿಸಲು ಕ್ರಮ ಜರುಗಿಸಬೇಕು. ಕಾರ್ಖಾನೆ ತೆಗೆದುಕೊಳ್ಳುವ ನಿರ್ಣಯವನ್ನು ರೈತ ಮುಖಂಡರು ಹಾಗೂ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ವೇತನಗೊಳಿಸಿ ಪುನರಾರಂಭ ಮಾಡಲು ಅಗತ್ಯ ಆರ್ಥಿಕ ನೆರವು ಹಾಗೂ ಮೂಲಾಧಾರಿತ ವಾಸ್ತವಿಕ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈ ವಿಚಾರದಲ್ಲಿ ವೈಯಕ್ತಿಕ ಗಮನ ಹರಿಸಲಾಗುವುದಲ್ಲದೆ ಜಿಲ್ಲೆಯ ಎಲ್ಲ ಸಚಿವರು, ಸಂಸದರು ಮತ್ತು ಶಾಸಕರನ್ನು ಆಹ್ವಾನಿಸಿ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅವರು ಹೇಳಿದರು.
ಅಧಿಕಾರಿಗಳು ಬದ್ಧತೆಯಿಂದ ರೈತರಿಗೆ ನೆರವಾಗುವ ರೀತಿಯಲ್ಲಿ ನೀರಾವರಿ, ವಿದ್ಯುತ್, ಕೃಷಿ, ಎಪಿಎಂಸಿ, ಸಹಕಾರ ಇಲಾಖೆಗಳ ಮತ್ತು ಬ್ಯಾಂಕ್ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ಸಭೆ ನಡೆಸಿ...: ಮೈಸೂರು ಜಿಲ್ಲೆಯ ರೈತ ಸಮುದಾಯ ತಮ್ಮ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಅನುವಾಗುವಂತೆ ಆಯಾ ತಾಲೂಕಿನ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ತುರ್ತು ಕ್ರಮ ಕೈಗೊಳ್ಳಬೇಕು.
ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ರೈತ ಮುಖಂಡರನ್ನು ಈ ಸಭೆಗೆ ಆಹ್ವಾನಿಸಬೇಕು ಎಂದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ತಾಲೂಕು ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ರಾಜ್ಯ ಸರ್ಕಾರ ಮೈಸೂರು ಜಿಲ್ಲೆಯನ್ನು ಬರಪೀಡಿತ ಘೋಷಿಸಿದ್ದು, 25,000 ಸಾಲ ಮನ್ನಾ ಹಾಗೂ ರೈತರು ಪಡೆದ ಇತರೆ ಬೆಳೆಸಾಲ ನವೀಕರಣದ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಎಲ್ಲ ಬ್ಯಾಂಕುಗಳಿಗೆ ಕೂಡಲೇ ನಿರ್ದೇಶನ ನೀಡಿ, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೆಸ್ಕ್ ವತಿಯಿಂದ ರೈತರ ಪಂಪ್ಸೆಟ್ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆಯಾಗದಂತೆ ಟಿಸಿ ಮತ್ತಿತರ ವಿದ್ಯುತ್ ಉಪಕರಣಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಶಿವಲಿಂಗಯ್ಯ, ನೀರಾವರಿ ಇಲಾಖೆ ಅಧಿಕಾರಿಗಳಾದ ಶಿವಮೂರ್ತಿ, ರವಿಕುಮಾರ್, ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ಹಳೆ ಮಿರ್ಲೆ ಸುನಯಗೌಡ, ಚಿಕ್ಕಸ್ವಾಮಿ, ಸಿ.ಎಂ. ನಾಗರಾಜು, ಬಿ.ಟಿ. ಪ್ರಭಾಕರ್, ಸಿದ್ದೇಶ್, ಕುಪ್ಯ ಜವರಯ್ಯ, ಕೆಂಡಗಣ್ಣಸ್ವಾಮಿ, ಪುಟ್ಟಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement