ಜನಸಂಖ್ಯಾ ನಿಯಂತ್ರಣ ಅಗತ್ಯ: ಸೋಮಶೇಖರ್
ಕ.ಪ್ರ.ವಾರ್ತೆ ಮೈಸೂರು ಜು. 11
ಪ್ರತಿ ಕುಟುಂಬಕ್ಕೆ ಹೆಣ್ಣಾಗಲಿ, ಗಂಡಾಗಲಿ ಒಂದೇ ಮಗು ಸಾಕು. ದೇಶದಲ್ಲಿ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದ್ದು, ಇದರ ನಿಯಂತ್ರಣ ಅಗತ್ಯ ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿರಿಯ ಪುಷ್ಪ ಕುಟುಂಬ ಕಲ್ಯಾಣ ಕೇಂದ್ರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸಂಯುಕ್ತವಾಗಿ ಸೇಂಟ್ ಥೆರೆಸಾ ಚರ್ಚ್ ಶಾಲಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಜಿಲ್ಲಾಮಟ್ಟದ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಅತಿ ಸಣ್ಣ ವಯಸ್ಸಿನಲ್ಲೆ ಮದುವೆ ಮಾಡಿಸಬಾರದು. ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಜನಸಂಖ್ಯೆ ಕಡಿಮೆ ಇರುವ ದೇಶಗಳು ಅಭಿವೃದ್ಧಿ ಹೊಂದಿವೆ. ನಮ್ಮ ದೇಶದ ಜನಸಂಖ್ಯೆ ಕಡಿಮೆ ಇದ್ದಿದ್ದರೆ ಪ್ರತಿಯೊಬ್ಬರು ಕಾರಿನಲ್ಲಿ ಓಡಾಡಬಹುದಿತ್ತು ಎಂದು ತಿಳಿಸಿದರು.
ಸೌಲಭ್ಯ ಒದಗಿಸಲು ಕಷ್ಟ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಇದಕ್ಕೆ ಅನಕ್ಷರತೆ, ಬಾಲ್ಯವಿವಾಹ, ಮಾಹಿತಿ ಕೊರತೆ ಕಾರಣವಾಗಿದೆ.
ಪ್ರಸ್ತುತ ದೇಶದಲ್ಲಿ 121 ಕೋಟಿ, ಕರ್ನಾಟಕದಲ್ಲಿ 6.11 ಕೋಟಿ ಜನಸಂಖ್ಯೆ ಇದೆ. ಜನಸಂಖ್ಯೆ ಹೀಗೆ ಬೆಳೆಯುತ್ತಿದ್ದರೆ ಎಲ್ಲರಿಗೂ ಮೂಲ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದರು.
ಪ್ರಸ್ತುತ ಜನನ ಪ್ರಮಾಣ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದ್ದು, ಜೀವಿತ ಅವಧಿ ಹೆಚ್ಚಾಗಿದೆ.
ದೇಶದ ಆರೋಗ್ಯ ವ್ಯವಸ್ಥೆ ಅಳೆಯಲು ಜೀವಿತ ಅವಧಿ ಮುಖ್ಯವಾಗಿದೆ. ದೇಶದ ಆರೋಗ್ಯ ವ್ಯವಸ್ಥೆ ಸುಧಾರಣೆಯಾಗಿದ್ದು, ಇನ್ನಷ್ಟು ಸುಧಾರಣೆ ಆಗಬೇಕಿದೆ ಎಂದು ಹೇಳಿದರು.
ಜನಸಂಖ್ಯಾ ಸ್ಫೋಟ ಕುರಿತು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ಹಿರಣ್ಣಯ್ಯ ಉಪನ್ಯಾಸ ಮಾಡಿದರು. ಕಿರಿಯ ಪುಷ್ಪ ಕುಟುಂಬ ಕಲ್ಯಾಣ ಕೇಂದ್ರ ಯೋಜನಾ ವ್ಯವಸ್ಥಾಪಕ ಫಾ.ಪಿ. ಜೋನಸ್, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್, ಡೆಂಘೀ ನಿಯಂತ್ರಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ, ಆರೋಗ್ಯ ನಿರೀಕ್ಷಿಕ ಶಿವರಾಮು ಇದ್ದರು.
ಗೈರು ಗೈರು...: ಶಾಸಕ ಎಂ.ಕೆ. ಸೋಮಶೇಖರ್ ಅವರನ್ನು ಹೊರತುಪಡಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಇವರ ಜತೆಗೆ ಅಧಿಕಾರಿಗಳು ಸಹ ಗೈರು ಹಾಜರಾಗಿದ್ದು ಕಂಡು ಬಂತು.