ಜಿಲ್ಲೆಯಲ್ಲಿ ಶೇ. 55 ಪ್ರದೇಶದಲ್ಲಿ ಮುಂಗಾರು ಬಿತ್ತನೆ
ಕ.ಪ್ರ.ವಾರ್ತೆ ಮೈಸೂರು ಜು. 11
ಜಿಲ್ಲೆಯಲ್ಲಿ 2013- 14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯಿದ್ದು, ಜುಲೈ 8 ರವರೆಗೆ ಒಟ್ಟು 2,31,071 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಹಾಗೂ ಬಿತ್ತನೆಯಲ್ಲಿ ಒಟ್ಟು ಶೇ. 55 ರಷ್ಟು ಪ್ರಗತಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಆರ್. ಕೃಷ್ಣಯ್ಯ ತಿಳಿಸಿದ್ದಾರೆ.
ಈ ಪೈಕಿ ಶೇ. 75 ರಷ್ಟು ಅಂದರೆ 2,25,686 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ಶೇ. 5 ರಷ್ಟು ಅಂದರೆ 5,385 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 40,252 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 46,106 ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳು, 9,924 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆಗಳು, 50,374 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಅಲ್ಲದೆ 81,117 ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪು ಹಾಗೂ 979 ಹೆಕ್ಟೇರ್ ಕ್ಷೇತ್ರದಲ್ಲಿ ಹೊಸ ಕಬ್ಬಿನ ಮತ್ತು 2,319 ಹೆಕ್ಟೇರ್ ಪ್ರದೇಶದಲ್ಲಿ ಕೂಳೆ ಕಬ್ಬಿನ ನಾಟಿ ಕಾರ್ಯ ಪೂರ್ಣಗೊಂಡಿದೆ.
ಕೃಷಿ ಚಟುವಟಿಕೆಗಳು: ಜಿಲ್ಲೆಯಲ್ಲಿ ಮುಂಗಾರು ಮಳೆಯಾದ ಪ್ರದೇಶದಲ್ಲಿ ರೈತ ಸಮುದಾಯ ವಿವಿಧ ಬೆಳೆಗಳ ಬಿತ್ತನೆಗಾಗಿ ಭೂಮಿ ತಯಾರಿ ಮತ್ತು ಮುಖ್ಯ ಭೂಮಿ ಸಿದ್ಧಪಡಿಸುವ ಮತ್ತು ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೋಳ, ಎಳ್ಳು, ದ್ವಿದಳ ಧಾನ್ಯಗಳು ಹೂ ಮತ್ತು ಕಾಳು ಕಟ್ಟುವ ಹಂತದಲ್ಲಿದ್ದರೆ ಹತ್ತಿ ಬೆಳೆಯು ಬೆಳವಣಿಗೆ, ಮೊಗ್ಗು ಮತ್ತು ಹೂವು ಹಂತದಲ್ಲಿದೆ. ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯ ಬೆಳೆಗಳು, ನೆಲಗಡಲೆ, ಹರಳು ಬೆಳೆಗಳು ಬೆಳವಣಿಗೆ ಹಂತದಲ್ಲಿವೆ. ರಾಗಿ, ಮುಸುಕಿನ ಜೋಳ ಮತ್ತು ನೆಲಗಡಲೆ ಬಿತ್ತನೆ ಕಾರ್ಯ ಮುಂದುವರಿದಿದೆ. ಹೊಗೆಸೊಪ್ಪು ಬೆಳವಣಿಗೆ ಹಂತದಲ್ಲಿದೆ. ದ್ವಿದಳ ಧಾನ್ಯ ಬೆಳೆಗಳಲ್ಲಿ ಹೇನು ಮತ್ತು ಹಳದಿ ನಂಜುರೋಗ ಹಾಗೂ ಹತ್ತಿ ಬೆಳೆಯಲ್ಲಿ ರಸಹೀರುವ ಕೀಟ ಬಾಧೆ ಕಂಡು ಬಂದಿದ್ದು, ಇದರ ಹತೋಟಿಗೆ ಔಷಧಿ ಸಿಂಪಡಣೆಗೆ ಕ್ರಮ ವಹಿಸಿದೆ.
ಮಳೆ ವಿವರ: ಜಿಲ್ಲೆಯ ಸರಾಸರಿ ವಾರ್ಷಿಕ ವಾಡಿಕೆ ಮಳೆ 801.4 ಮಿಮೀ ಇದ್ದು, ಜಿಲ್ಲೆಯಲ್ಲಿ 2013ರ ಜನವರಿಯಿಂದ ಜುಲೈ 8ರವರೆಗೆ 326.1 ಮಿಮೀ ವಾಡಿಕೆ ಮಳೆಗೆ ಸರಾಸರಿ 311 ಮಿಮೀ ಮಳೆಯಾಗಿದ್ದು, ಮಳೆ ಪ್ರಮಾಣ ಶೇ. 95ರಷ್ಟು ಆಗಿದೆ. ಜೂನ್ ತಿಂಗಳಲ್ಲಿ 85.1 ಮಿಮೀ ವಾಡಿಕೆ ಮಳೆಗೆ ಸರಾಸರಿ 114.4 ಮಿಮೀ ಮಳೆಯಾಗಿದೆ. ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಳೆದ 2012ನೇ ಸಾಲಿನಲ್ಲಿ ಜನವರಿಯಿಂದ ಜುಲೈ 8ರವರೆಗೆ 326.1 ಮಿಮೀ ವಾಡಿಕೆ ಮಳೆಗೆ ಸರಾಸರಿ 172.3 ಮಿಮೀ ಮಾತ್ರ ಮಳೆಯಾಗಿತ್ತು.
ರಸಗೊಬ್ಬರ, ಬಿತ್ತನೆ ಬೀಜ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 96,300 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮತ್ತು ಖಾಸಗಿಯವರ ಪ್ರಾರಂಭಿಕ ದಾಸ್ತಾನು ಸೇರಿದಂತೆ ಈವರೆಗೆ ಒಟ್ಟು 49,652 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ ಮತ್ತು 26,659 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ ಹಾಗೂ 22,992 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ರಿಯಾಯಿತಿ ದರದ 30,421 ಕ್ವಿಂಟಲ್ ಬಿತ್ತನೆ ಬೀಜ ವಿತರಿಸುವ ಗುರಿಯಿದೆ. ಈವರೆಗೆ ದೃಢೀಕೃತ ಹೈಬ್ರಿಡ್ ಜೋಳ, ದ್ವಿದಳ ಧಾನ್ಯ ಬೆಳೆಗಳ 5,739 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜಾಗಿದ್ದು, 2,463.8 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗಿದೆ. ಕೆಎಸ್ಎಸ್ಸಿ, ಎನ್ಎಸ್ಸಿ ಮತ್ತು ಖಾಸಗಿಯವರಲ್ಲಿ ಒಟ್ಟು 25,183 ಕ್ವಿಂಟಲ್ ಬಿತ್ತನೆ ಬೀಜದ ಲಭ್ಯತೆ ಇದೆ.
ಬಿತ್ತನೆಯಾದ ಪ್ರದೇಶದ ವಿವರ
ಎಚ್.ಡಿ. ಕೋಟೆ- 56,278 (ಗುರಿ 69,100), ಶೇ. 81 ರಷ್ಟು, ಹುಣಸೂರು- 54,086 (95,000), ಶೇ. 38 ರಷ್ಟು, ಕೆ.ಆರ್. ನಗರ- 15,795 (57,700), ಶೇ. 27 ರಷ್ಟು, ಮೈಸೂರು- 14,718 (34,500), ಶೇ. 43 ರಷ್ಟು, ನಂಜನಗೂಡು- 41,998(70,200), ಶೇ. 60 ರಷ್ಟು, ಪಿರಿಯಾಪಟ್ಟಣ- 43,429 (52,450), ಶೇ. 83 ರಷ್ಟು, ಟಿ. ನರಸೀಪುರ- 4,767 (41,245), ಶೇ. 12 ರಷ್ಟು. ಜಿಲ್ಲೆಯಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2,11,063 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದ್ದು, ಬಿತ್ತನೆಯ ಶೇ. 49 ರಷ್ಟು ಪ್ರಗತಿಯಾಗಿತ್ತು.
ಜಿಲ್ಲೆಯ ಮಳೆ ವಿವರ
(ಜನವರಿಯಿಂದ ಜುಲೈ 8ರವರೆಗೆ) ಎಚ್.ಡಿ. ಕೋಟೆ- 500.4 (ವಾಡಿಕೆ ಮಳೆ 378), ಶೇ. 132ರಷ್ಟು, ಹುಣಸೂರು- 251.3 (322.2), ಶೇ. 78ರಷ್ಟು, ಕೆ.ಆರ್. ನಗರ- 241.4 (302.1), ಶೇ. 80ರಷ್ಟು, ಮೈಸೂರು- 184.7 (292.6), ಶೇ. 63ರಷ್ಟು, ನಂಜನಗೂಡು- 243.4 (279.8), ಶೇ. 87ಷ್ಟು. ಪಿರಿಯಾಪಟ್ಟಣ- 344.9 (349.4), ಶೇ. 99ರಷ್ಟು, ಟಿ. ನರಸೀಪುರ- 196.5 (275.6), ಶೇ. 71ರಷ್ಟು.