ಡಿಸಿಪಿ ಎ.ಎನ್. ರಾಜಣ್ಣ ಅಧಿಕಾರ ಸ್ವೀಕಾರ
ಕ.ಪ್ರ.ವಾರ್ತೆ ಮೈಸೂರು ಜು. 11
ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ ಅವರು ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಡಿಸಿಪಿ ಬಸವರಾಜ ವೈ. ಮಾಲಗತ್ತಿ ಅಧಿಕಾರ ವಹಿಸಿಕೊಟ್ಟರು.
ಮಂಡ್ಯ ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಣ್ಣ ಅವರನ್ನು ಸರ್ಕಾರ ಬುಧವಾರ ಮೈಸೂರು ಡಿಸಿಪಿಯಾಗಿ ನಿಯೋಜಿಸಿತ್ತು. ಇಲ್ಲಿ ಡಿಸಿಪಿಯಾಗಿದ್ದ ಬಸವರಾಜ ವೈ. ಮಾಲಗತ್ತಿ ಅವರನ್ನು ಬೆಂಗಳೂರು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಎಸ್ಪಿಯಾಗಿ ವರ್ಗಾಯಿಸಿದೆ.
ರಾಜಣ್ಣ ಪರಿಚಯ: ರಾಜಣ್ಣ ಅವರು ಮೂಲತಃ ಕೋಲಾರ ಜಿಲ್ಲೆ ಅಜ್ಜಪ್ಪನಹಳ್ಳಿಯವರು. 1975ರಲ್ಲಿ ಎಸ್ಐಯಾಗಿ ಪೊಲೀಸ್ ಇಲಾಖೆಗೆ ಸೇರಿದ ಅವರು, ಬೆಂಗಳೂರು ಇನ್ನಿತೆರೆಡೆ ಕಾರ್ಯ ನಿರ್ವಹಿಸಿದ್ದರು. 1991 ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿ ತುಮಕೂರು, ಕೋಲಾರ, ಪಾವಗಡ, ರಾಮನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2001 ರಲ್ಲಿ ಡಿವೈಎಸ್ಪಿಯಾಗಿ ಬಡ್ತಿ ಪಡೆದು ಬೆಂಗಳೂರು ಲೋಕಾಯುಕ್ತ, ವಿರಾಜಪೇಟೆ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದು, 2008 ರಲ್ಲಿ ಹೆಚ್ಚುವರಿ ಎಸ್ಪಿಯಾಗಿ ಬಡ್ತಿಯಾಗಿ ಮಂಡ್ಯ ಜಿಲ್ಲೆಯಲ್ಲಿ 5 ವರ್ಷ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಮೈಸೂರು ನಗರ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಯುವತಿ ಅಪಹರಣ: ಆರೋಪಿ ಸೆರೆ
ಮಳವಳ್ಳಿ: ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲೇ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರಿನ ವಾಸಿಯಾದ ಅಕ್ಮಲ್ಪಾಷಾ ಎಂಬಾತನೇ ಅಪಹರಣ ಆರೋಪದ ಮೇಲೆ ಬಂಧಿತ ಆರೋಪಿಯಾಗಿದ್ದು ಈತ ಪಟ್ಟಣದ ವಾಸಿ ನಾಸಿರ್ಬಾನು ಎಂಬಾಕೆಯನ್ನು ಕಳೆದ ಮಂಗಳವಾರ ರಾತ್ರಿ ಉಪಾಯದಿಂದ ಅಪಹರಿಸಿದ್ದ ಎನ್ನಲಾಗಿದೆ.
ಈಗಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿರುವ 17ವರ್ಷದ ಈಕೆ ಮೈಸೂರಿಗೆ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪರಿಚಯ ಬೆಳಿಸಿಕೊಂಡಿದ್ದ. ಈತ ಆಕೆಯ ಪ್ರೀತಿಸುವ ನಾಟಕವಾಡಿ ಕಳೆದ ಮಂಗಳವಾರ ರಾತ್ರಿ ಉಪಾಯದಿಂದ ಅಪಹರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ನಾಸಿರಬಾನು ಕಾಣೆಯಾಗಿರುವ ಕುರಿತು ಎಲ್ಲಾ ಕಡೆ ಹುಡುಕಿದ ಪೋಷಕರು ಬುಧವಾರ ಸಂಜೆ ದೂರು ನೀಡುತ್ತಿದ್ದಂತೆ ಅಪಹರಣ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ಎ.ಕೆ. ರಾಜೇಶ್ ಹಾಗೂ ಸಿಬ್ಬಂದಿ ಮೈಸೂರಿನಲ್ಲಿ ಆರೋಪಿ ಸಮೇತ ಯುವತಿಯನ್ನು ಪತ್ತೆಹಚ್ಚುವುದರ ಜೊತೆಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೊತ್ತಾಗಿದೆ.