ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

15ಕ್ಕೆ ಬಣ್ಣಾರಿ ಕಾರ್ಖಾನೆ ಮುಂಭಾಗ ರೈತರ ಸಭೆ

Rashmi Kasaragodu
Updated On : 13 Jul 2013, 12:26 pm

ಮೈಸೂರು: 2010-11 ಹಾಗೂ 2011-12ನೇ ಸಾಲಿನ ಕಬ್ಬಿನ ಬಾಕಿ ಹಣ ವಾಪಸ್ ಮತ್ತು ಪ್ರಸಕ್ತ ಸಾಲಿಗೆ 4 ಸಾವಿರ ಮುಂಗಡ ಹಣ ನಿಗದಿ ಮಾಡುವ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜು.15 ರಂದು ನಂಜನಗೂಡು ತಾ. ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಸಭೆ ಸೇರಲು ನಿರ್ಧರಿಸಲಾಗಿದೆ.
ಅಂದು ಮಧ್ಯಾಹ್ನ 12 ಗಂಟೆಗೆ ರೈತ ಸಂಘದ ಪದಾಧಿಕಾರಿಗಳು, ಕಬ್ಬು ಬೆಳೆಗಾರರು ಭಾಗವಹಿಸುವರು. 2010-11ನೇ ಸಾಲಿನ 13 ಲಕ್ಷ ಟನ್ ಕಬ್ಬಿಗೆ 400 ನಂತೆ 52 ಕೋಟಿ ಹಾಗೂ 2011-12ನೇ ಸಾಲಿನ 14 ಲಕ್ಷ ಟನ್ ಕಬ್ಬಿಗೆ 480 ನಂತೆ 67.20 ಕೋಟಿ ಬಾಕಿ ನೀಡಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ಕರೆದು ಕಾರ್ಖಾನೆಯವರಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಚರ್ಚಿಸಲು ಸಭೆ ಏರ್ಪಡಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಬ್ಬು ಸಾಗಿಸಬೇಡಿ: ಬಣ್ಣಾರಿ ಸಕ್ಕರೆ ಕಾರ್ಖಾನೆಯು ಬಾಕಿ ಹಣ ಹಾಗೂ ಪ್ರಸಕ್ತ ಸಾಲಿಗೆ ಮುಂಗಡ ಹಣ ನೀಡದಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಕಬ್ಬು ಕಟಾವಿಗೆ ಮುಂದಾಗಬಾರದು. ಕಟಾವು ಮಾಡಿರುವ ಕಬ್ಬನ್ನು ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಸಾಗಿಸಲು ಮುಂದಾಗಬಾರದು ಎಂದು ರೈತರಲ್ಲಿ ಮನವಿ ಮಾಡಿದ ಅವರು, ಕಾರ್ಖಾನೆ ಮುಖ್ಯಮಂತ್ರಿಗಳ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಅವರೇ ಖುದ್ದಾಗಿ ನಿಂತು ಸಮಸ್ಯೆ ಪರಿಹರಿಸಿಕೊಡಬೇಕು. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಇಚ್ಛಾಶಕ್ತಿ ಇಲ್ಲದೇ ಹೋದರೆ ನಮ್ಮ ಹೋರಾಟಕ್ಕೆ ಯಾವುದೇ ಬಲ ಬರುವುದಿಲ್ಲ ಎಂದರು.
ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ರಾಜೇಶ್, ಶಿವಸ್ವಾಮಿ, ಪ್ರಕಾಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement