ನಗರದಲ್ಲಿ ನಕಲಿ ವೈದ್ಯನ ಬಂಧನ
ಕ.ಪ್ರ.ವಾರ್ತೆ ಮೈಸೂರು ಜು. 12
ಎಂಬಿಬಿಎಸ್ ಪದವಿ ಪಡೆಯದಿದ್ದರೂ ವೈದ್ಯಕೀಯ ಚಿಕಿತ್ಸೆಗೆ ಮುಂದಾಗಿದ್ದ ನಕಲಿ ವೈದ್ಯನೊಬ್ಬನನ್ನು ಬಂಧಿಸುವಲ್ಲಿ ನಕಲಿ ವೈದ್ಯರ ವಿರುದ್ಧ ಕಾರ್ಯಪಡೆ ಶುಕ್ರವಾರ ಯಶಸ್ವಿಯಾಗಿದೆ.
ಚಾಮರಾಜಪುರಂನಲ್ಲಿ ನವೀನ್ ಹೆಲ್ತ್ ಕೇರ್ ಸೆಂಟರ್ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನವೀನ್ಕುಮಾರ್ ಎಂಬಾತನೇ ಬಂಧಿತನಾಗಿದ್ದು, ಈತ ಕೇವಲ ಪಿಯುಸಿ ಮಾತ್ರವೇ ಓದಿದ್ದು, ಎಂಬಿಬಿಎಸ್ ಸುಳ್ಳು ಪದವಿ ಪ್ರಮಾಣ ಪತ್ರ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಅನಧಿಕೃತ ಪ್ರಾಕ್ಟಿಸ್ ಆರೋಪದ ಮೇಲೆ ಕಳೆದ ಆರು ತಿಂಗಳ ಹಿಂದೆ ನವೀನ್ಕುಮಾರ್ನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಅದೇ ಕೆಲಸಕ್ಕೆ ಮುಂದಾಗಿರುವುದನ್ನು ಖಚಿತ ಪಡಿಸಿಕೊಂಡು ಕಾರ್ಯಪಡೆಯ ಸದಸ್ಯರು ಪೊಲೀಸರ ಸಹಕಾರದೊಂದಿಗೆ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ.
ಸ್ಕಾನಿಂಗ್ ಸಾಧನ, ಎಕ್ಸ್ರೇ ಯಂತ್ರ ಹಾಗೂ ಇನ್ನಿತರ ವೈದ್ಯಕೀಯ ಪರಿಕರ ಜಪ್ತಿ ಮಾಡಿರುವ ಕಾರ್ಯಪಡೆಯು ಆತನ ವಿರುದ್ಧ ಲಕ್ಷ್ಮೀಪುರಂ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಜಿಲ್ಲಾಧಿಕಾರಿ ಡಾ. ರಾಮೇಗೌಡ ಅವರು ಇತ್ತೀಚೆಗೆ ಸಭೆ ನಡೆಸಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಕಲಿ ವೈದ್ಯರ ವಿರುದ್ಧ ಕಾರ್ಯಚರಣೆ ನಡೆಸುವ ಸಲುವಾಗಿ ಈ ಕಾರ್ಯಪಡೆ ರಚಿಸಸಾಗಿದ್ದು, ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಧಿಕೃತ ಚಿಕಿತ್ಸಾ ಸೇವೆ ಹಾಗೂ ನಕಲಿ ವೈದ್ಯರ ಹಾವಳಿ ತಪ್ಪಿಸಲು ಇದು ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಮಾಲೇಗೌಡ ತಿಳಿಸಿದ್ದಾರೆ.
ಕಾರ್ಯಪಡೆಯ ಕಾರ್ಯದರ್ಶಿ ಡಾ. ಎಸ್.ಎಂ. ಮಾಲೇಗೌಡ, ಸದಸ್ಯರಾದ ಡಾ. ವೇದ. ಡಾ. ಸತ್ಯಮೂರ್ತಿ, ಡಾ. ಸತೀಶ್, ಐಎಂಎ ಮೈಸೂರು ಅಧ್ಯಕ್ಷ ಡಾ. ಸಿ. ಶರತ್ಕುಮಾರ್, ಡಿಸಿಪಿ ಕೆ.ಪಿ. ಭೀಮಯ್ಯ ಇದ್ದರು.