ಅಕ್ಕಿ ಬದಲು ರಿಯಾಯ್ತಿ ಬಿತ್ತನೆ ಬೀಜ ನೀಡಲು ಆಗ್ರಹ
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಜು. 13
ಒಂದು ರು.ಗೆ ಅಕ್ಕಿ ನೀಡುವುದಾಗಿ ಹೇಳಿರುವ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಏಕೆ ನೀಡುತ್ತಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.
ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡ ರೈತ ಲೋಕೇಶ್ ಮಾತನಾಡಿ, ಒಂದು ಕೆಜಿ ಅಕ್ಕಿಗೆ ಒಂದು ರು.ನಂತೆ ಕಡು ಬಡಜನತೆಗೆ ನೀಡುವುದಾಗಿ ಘೋಷಿಸಿರುವ ಸರ್ಕಾರವು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳಿಗೆ ಯಾವುದೆ ರೀತಿಯ ರಿಯಾಯಿತಿ ನೀಡುತ್ತಿಲ್ಲ.
525 ಕೆಜಿಯ ಒಂದು ಬ್ಯಾಗಿಗೆ 525 ಗಳಿಂದ 625 ನೀಡಿ ಬಿತ್ತನೆ ಬೀಜ ಪಡೆಯುತ್ತಿದ್ದಾರೆ. ಕಳೆದ ವರ್ಷ ಇದೇ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ 100ಕ್ಕೆ ನೀಡುತ್ತಿದ್ದರು. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಹಲವಾರು ವರ್ಷಗಳಿಂದ ಮುಖ್ಯ ರಸ್ತೆಯಲ್ಲಿಯೇ ಕೋಳಿ ಅಂಗಡಿ ತೆರೆದು ಅದರ ತ್ಯಾಜ್ಯ ವಸ್ತುಗಳನ್ನು ಚರಂಡಿಯಲ್ಲಿಯೇ ಬಿಸಾಡಿ ಅದನ್ನು ಸ್ವಚ್ಛಗೊಳಿಸದೆ ನಾರುತ್ತಿದೆ. ಅದರ ಸಮೀಪದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡಕಚೇರಿ, ಮಹಿಳಾ ಕಾಲೇಜು ಹಾಗೂ ಪಕ್ಕದಲ್ಲಿಯೇ ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, ಪ್ರತಿನಿತ್ಯ ನೂರಾರು ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಎರಡು ದಿನ ಈ ದುರ್ವಾಸನೆಯಿಂದ ಹಾಲು ಕೆಟ್ಟು ಹೋಗಿದ್ದು, ಇದರ ಬಗೆಗೆ ದೂರು ನೀಡಿದರು.
ಗ್ರಾಪಂ ಅಧ್ಯಕ್ಷೆ ರಾಣಿರಾಜಣ್ಣ, ಮಾಜಿ ಅಧ್ಯಕ್ಷ ಎಸ್.ವಿ. ನಟರಾಜು, ಪಿಡಿಒ ಮಂಜುನಾಥ್, ಎಸ್.ಆರ್. ರಾಮೇಗೌಡ, ಗ್ರಾಪಂ ಸದಸ್ಯರಾದ ರೇವಣ್ಣ, ನರಸಿಂಹ, ಲಕ್ಷ್ಮಣೇಗೌಡ, ಕೀರ್ತಿ, ಶಶಿಕಲಾ ನಾರಾಯಣ, ಅಧಿಕಾರಿಗಳಾದ ಕುಮಾರ, ವಾಜಯಂತ್ರಿ, ಎಂಜಿನಿಯರ್ ನಾಗರಾಜು ಇದ್ದರು.