ಮಳಿಗೆ ಹಂಚಿಕೆಯಲ್ಲಿ ಅನ್ಯಾಯ: ಆರೋಪ
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 13
ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆಯುತ್ತಿದ್ದು, ಹಣವುಳ್ಳ ಬಲಾಢ್ಯರು ಮುಖ್ಯಾಧಿಕಾರಿಗಳು ಶಾಮೀಲಾಗಿ, ಬಡ ಪೆಟ್ಟಿಗೆ ಅಂಗಡಿ ವ್ಯಾಪಾರಸ್ಥರಿಗೆ ವಂಚಿಸುತ್ತಿದ್ದಾರೆ ಎಂದು ಪೆಟ್ಟಿಗೆ ಅಂಗಡಿ ವ್ಯಾಪಾರಿಗಳು ಆರೋಪಿಸಿದ್ದಾರೆ.
ಇಲ್ಲಿನ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಯ ಬದಿಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಪೆಟ್ಟಿಗೆ ಅಂಗಡಿಗಳನ್ನಿಕೊಂಡು ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದೇವು. ಪಪಂ ಆಡಳಿತ ಎರಡೂ ರಸ್ತೆಗಳಲ್ಲೂ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಯಿತು. ತೆರವುಗೊಳಿಸುವ ಸಂದರ್ಭದಲ್ಲಿಯೇ ನೂತನ ಮಳಿಗೆಗಳನ್ನು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡವರಿಗೆ ಬಾಡಿಗೆ ಆಧಾರದ ಮೇಲೆ ನೀಡುವ ಭರವಸೆ ನೀಡದ್ದರು.
ಈಗ ಮಳಿಗೆಗಳು ನಿರ್ಮಾಣಗೊಂಡ ಬಳಿಗೆ ಮಳಿಗೆ ಹಂಚಿಕೆಗಾಗಿ ಪೆಟ್ಟಿಗೆ ಅಂಗಡಿ ಮಾಲೀಕರ ಸಂಘ ಅಸ್ತಿತ್ವಕ್ಕೆ ತರಲಾಯಿತು. ಎಲ್ಲ ಪೆಟ್ಟಿಗೆ ಅಂಗಡಿ ಮಾಲೀಕರಿಗೂ ಮಳಿಗೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕಾದ ಸಂಘದಲ್ಲಿ ಕೆಲವು ಪ್ರಭಾವಿಗಳು ಪಪಂ ಮುಖ್ಯಾಧಿಕಾರಿಗಳು ಹಾಗೂ ಹಿಂದಿನ ಆಡಳಿತ ಮಂಡಳಿ ಸದಸ್ಯರೊಂದಿಗೆ ಶಾಮೀಲಾಗಿ ಮಳಿಗೆ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿರುವುದರಿಂದ ಬಡವರಿಗೆ ಮಳಿಗೆಗಳು ಮರಿಚೀಕೆಯಾಗುವ ಪರಿಸ್ಥಿತಿ ಬಂದೋದಗಿದೆ.
ಮಳಿಗೆ ಹಂಚಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಕ್ಷೇತ್ರದ ಶಾಸಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಮಹದೇವಪ್ಪ ಅವರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಮಳಿಗೆ ಹಂಚಿಕೆ ತಡೆಹಿಡಿದು, ನ್ಯಾಯಯುತವಾಗಿ ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪೆಟ್ಟಿಗೆ ಅಂಗಡಿ ವ್ಯಾಪಾರಿಗಳಾದ ಎನ್.ಎಂ. ಬಸವರಾಜು, ಚಿಕ್ಕರಾಚಯ್ಯ, ಗೀತಾ, ಬಸವನಾಯಕ, ದೇವಿರಮ್ಮ, ಚಂದ್ರು, ಗೋಪಿನಾಯಕ ಹಾಗೂ ಕೆ.ವಿ. ರಂಗಸ್ವಾಮಿ ಅವರು ಮನವಿ ಮಾಡಿದ್ದಾರೆ.