ವಿಶ್ವನಾಥ್ ವಿರುದ್ಧ ಶಾಸಕರ ವಾಗ್ದಾಳಿ
ಕೆ.ಆರ್. ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾಜಕೀಯ ಚರ್ಚೆ ಮತ್ತು ಸಂಘರ್ಷ ನಡೆಸಬಹುದು. ಆದರೆ, ನಮ್ಮ ತಾಲೂಕಿನ ಮಹಾನ್ ಸುಳ್ಳುಗಾರರಾಗಿರುವ ಗುಳ್ಳೆನರಿ ರಾಜಕಾರಣಿ ವಿರುದ್ಧ ಸತ್ಯ ಮಾತನಾಡಿದರೆ, ಅವರು ಅದನ್ನು ಸುಳ್ಳು ಎಂದು ವಿತಂಡವಾದ ಮಾಡುತ್ತಾರೆ ಎಂದು ಸಂಸದ ಎಚ್. ವಿಶ್ವನಾಥ್ ವಿರುದ್ಧ ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.
ಇಲ್ಲಿನ ಒಕ್ಕಲಿಗರ ಸಂಘದಲ್ಲಿ ನಡೆದ ಶಾಸಕರ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಂಸದರು ಒಂದು ಸತ್ಯ ಹೇಳಿದರೆ ತೊಂಬತ್ತೊಂಬತ್ತು ಸುಳ್ಳು ಹೇಳುತ್ತಾರೆ. ಇವರ ಮತ್ತು ತಾಲೂಕಿನ ಕಾಂಗ್ರೆಸ್ ಪಕ್ಷದ ಹತ್ತಾರು ನಾಯಕರ ವಿರುದ್ಧ ಹೋರಾಟ ಮಾಡಿ ಜಯಿಸುವ ಶಕ್ತಿಯನ್ನು ತಾಲೂಕಿನ ಮತದಾರರು ನನಗೆ ನೀಡಿದ್ದಾರೆ. ಆದ್ದರಿಂದ ವಿರೋಧಿಗಳ ಟೀಕೆಗೆ ನಾನು ಜಗ್ಗುವುದಿಲ್ಲ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಸ್ವಜಾತಿ ರಾಜಕಾರಣ ಮಾಡಿ ಬಿಜೆಪಿ, ಕೆಜೆಪಿ ಸುತ್ತಿಕೊಂಡು ಬಂದ ದೊಡ್ಡಸ್ವಾಮೇಗೌಡರಿಗೆ ಪಕ್ಷದ ಟಿಕೆಟ್ ನೀಡಿ, ಕಾಂಗ್ರೆಸ್‌ನಲ್ಲಿದ್ದ ಸಮರ್ಥ ನಾಯಕರನ್ನು ಕಡೆಗಾಣಿಸಿದರು. ಆದರೆ, ಹಿಂದೆ ಮಾಜಿ ಸಚಿವ ಎಸ್. ನಂಜಪ್ಪ ಅವರು ತಮ್ಮ ನಂತರ ಕುರುಬ ಸಮುದಾಯದ ಮಂಚನಹಳ್ಳಿ ಮಹದೇವ್ ಅವರಿಗೆ ಅವಕಾಶ ಕಲ್ಪಿಸಿದರು. ಇದು ನಿಜವಾದ ಸಾಮಾಜಿಕ ನ್ಯಾಯ ಮತ್ತು ಒಕ್ಕಲಿಗ ಸಮಾಜಕ್ಕಿರುವ ಸಾಮಾಜಿಕ ಕಾಳಜಿ ಎಂದು ಹೇಳಿದರು.
ಒಕ್ಕಲಿಗರ ಸಂಘದ ವತಿಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ಸಮುದಾಯ ಭವನದಿಂದ ಬರುವ ಆದಾಯದಲ್ಲಿ ಅರ್ಧ ಹಣವನ್ನು ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸಿ ಉಳಿದ ಹಣವನ್ನು ತಾಲೂಕಿನ ಪ್ರತಿ ಹೋಬಳಿ ಕೇಂದ್ರದಲ್ಲಿ ಒಕ್ಕಲಿಗರ ಸಂಘದ ಸಮುದಾಯ ಭವನ ನಿರ್ಮಾಣ ಮಾಡಲು ಬಳಸಿಕೊಳ್ಳಿ. ಉಳಿದ ಹಣವನ್ನು ನಾನು ಭವನಗಳಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.