ಉಸ್ತುವಾರಿ ಸಚಿವರಿಂದ ಮಾರುಕಟ್ಟೆ ಪರಿಶೀಲನೆ
ಕ.ಪ್ರ.ವಾರ್ತೆ ಮೈಸೂರು ಜು. 14
ಇಲ್ಲಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ತರಕಾರಿ ಮಾರಾಟಗಾರರು ಹಾಗೂ ಬೆಳೆಗಾರರ ಮಾರುಕಟ್ಟೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾನುವಾರ ಪರಿಶೀಲಿಸಿದರು.
ಇಲ್ಲಿನ ಮಾರಾಟಗಾರರು ಗಾಳಿ, ಮಳೆ, ಬಿಸಿಲು ಎನ್ನದೆ ಕಷ್ಟದ ಪರಿಸ್ಥಿತಿಯಲ್ಲಿ ಮಾರಾಟ ಮಾಡಬೇಕಿದೆ. ಧೂಳಿನ ಪರಿಸರ ಹಾಗೂ ಕೊಳಚೆ ನೀರು ವ್ಯಾಪಾರಿಗಳ ತಾಣಕ್ಕೆ ಮಾರಕವಾಗಿದೆ. ಅಲ್ಲದೆ, ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಹಲವು ಮಾರಾಟಗಾರರು ತಮ್ಮ ಅಳಲು ತೊಡಿಕೊಂಡರು.
ಸಮಸ್ಯೆ ಆಲಿಸಿದ ಸಚಿವ ಶ್ರೀನಿವಾಸ್ಪ್ರಸಾದ್, ಈ ನಿವೇಶನದ ವಿವಾದವು ನಾಯ್ಯಾಲಯದಲ್ಲಿ ಇರುವ ಕಾರಣ, ಯಥಾಸ್ಥಿತಿ ಕಾಪಾಡುವ ಮೂಲಕ, ಇಲ್ಲಿನ ಮಾರಾಟಗಾರರ ಅನುಕೂಲಕ್ಕಾಗಿ ಕೊಳಚೆ ನೀರು ಆವರಣದೊಳಗೆ ಬರದಂತೆ ತಡೆಗಟ್ಟಬೇಕು, ಶೌಚಾಲಯ ನಿರ್ಮಾಣ ಹಾಗೂ ವಾಹನ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂಬಂಧ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಈ ನಿವೇಶನದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ, ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತ ಮಾರುಕಟ್ಟೆಯಾಗಿ ರೂಪಿಸಲಾಗುವುದು ಎಂದು ರೈತರು ಹಾಗೂ ಮಾರಾಟಗಾರರಿಗೆ ಭರವಸೆ ನೀಡಿದರು.
ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಾ. ರಾಮೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಡಾ.ಎಚ್.ಟಿ. ಚಂದ್ರಶೇಖರ್, ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್ಸೂರ್ಮಠ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಒಣಭೂಮಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್, ಡಿಸಿಸಿ ಸದಸ್ಯ ಚಂದ್ರು, ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆಯ ಸಂಚಾಲಕ ಬೆಟ್ಟಯ್ಯ ಕೋಟೆ, ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಇದ್ದರು.