ಎಲ್ಲೈಸಿ ಹೇಳಿದ್ದೊಂದು, ಮಾಡಿದ್ದೊಂದು
ಕ.ಪ್ರ.ವಾರ್ತೆ ಮೈಸೂರು ಜು. 14
ಜೀವನ್ ಸುರಕ್ಷಾ ಪಾಲಿಸಿ ನೀಡುವಾಗ ಭಾರತೀಯ ಜೀವವಿಮಾ ನಿಗಮ ಹೇಳಿದ್ದು ಒಂದು, ಮಾಡಿದ್ದು ಮತ್ತೊಂದು...
- ಇದು ವಿಚಿತ್ರವಾದರೂ ಸತ್ಯ. ಇದರ ವಿರುದ್ಧ ನಿವೃತ್ತ ಡಿಎಫ್ಒ ಆರ್. ರಾಘವೇಂದ್ರ ರಾವ್ ಹೋರಾಟ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ರಾಘವೇಂದ್ರ ರಾವ್ ಅವರು 2001ರ ಮಾ. 28 ರಂದು 1 ಲಕ್ಷ ಮೊತ್ತದ ಎಲ್ಐಸಿ ಜೀವನ್ ಸುರಕ್ಷಾ ಪಾಲಿಸಿ ಪಡೆದರು. ಪ್ರತಿ ಸಾವಿರ ರು.ಗಳಿಗೆ 75 ರಂತೆ 1.90 ಲಕ್ಷ ನೀಡುವುದಾಗಿ ಹೇಳಲಾಗಿತ್ತು. ವಾರ್ಷಿಕ ಪ್ರೀಮಿಯಂ ಮೊತ್ತವನ್ನು 9,241 ಎಂದು ನಿಗದಿಪಡಿಸಲಾಯಿತು.
ಅದೇ ವರ್ಷದ ಜೂ. 22 ರಂದು ಎಲ್ಲೈಸಿ ಹಿರಿಯ ಶಾಖಾ ವ್ಯವಸ್ಥಾಪಕರು, ಕೆಆರ್ಎಸ್ ರಸ್ತೆ ಶಾಖೆ ಅವರಿಂದ ಬಂದ ಪಾಲಿಸಿ ಬಾಂಡ್ ಪಡೆದರು. ಬಾಂಡ್ ಜೊತೆಗಿದ್ದ ಪತ್ರದಲ್ಲಿ ಪಾಲಿಸಿಯಿಂದ ಆಗುವ ಅನುಕೂಲಗಳು ಹಾಗೂ ಪಾಲಿಸಿ ಅವಧಿ ಮುಕ್ತಾಯದ ನಂತರ ಸಿಗುವ ಪಿಂಚಣಿಯ ವಿವರ ನೀಡಲಾಗಿತ್ತು. ಪಿಂಚಣಿ ಪಾಲಿಸಿ ತೆಗೆದುಕೊಂಡಿರುವುದರಿಂದ ಪಾಲಿಸಿಯ ಅವಧಿ ಪೂರ್ಣಗೊಂಡ ನಂತರ ಪಿಂಚಣಿ ಆರಂಭವಾಗುತ್ತದೆ ಎಂದು ತಿಳಿಸಲಾಗಿತ್ತು. ಅದರಲ್ಲಿ ವಾರ್ಷಿಕ, 5, 10, 15 ಮತ್ತು ಅದರ ಮೇಲ್ಪಟ್ಟು ವರ್ಷಗಳಿಗೆ ಸಿಗುವ ವಾರ್ಷಿಕ ಪಿಂಚಣಿ, ಶೇ. 25 ರಷ್ಟು ಕಮ್ಯೂಟೇಷನ್ ಆದ ನಂತರ ಸಿಗುವ ವಾರ್ಷಿಕ ಪಿಂಚಣಿಯ ವಿವರ ನೀಡಲಾಗಿತ್ತು.
ಇದನ್ನು ಸ್ವೀಕರಿಸಿದ ರಾಘವೇಂದ್ರ ರಾವ್ ಅವರು ಪ್ರತಿವರ್ಷ ಪ್ರೀಮಿಯಂ ಹಣವನ್ನು ಕಳೆದ 12 ವರ್ಷಗಳಿಂದ ಪಾವತಿಸುತ್ತಾ ಬಂದರು. 1 ಲಕ್ಷ ಪಾಲಿಸಿಗೆ ಅವರು ಪಾವತಿಸಿದ ಪ್ರೀಮಿಯಂ 1.10 ಲಕ್ಷ . ಪಿಂಚಣಿ 2013ರ ಮಾ. 28 ರಿಂದ ಆರಂಭವಾಗಬೇಕಿತ್ತು. ಹೀಗಾಗಿ ಪಾಲಿಸಿಯ ನಿಬಂಧನೆಗಳ ಪ್ರಕಾರ ಆರು ತಿಂಗಳ ಮುಂಚಿತವಾಗಿ ತಮ್ಮ ಆಯ್ಕೆಯನ್ನು ತಿಳಿಸಲು ರಾಘವೇಂದ್ರ ರಾವ್ ಅವರಿಗೆ ಮುಕ್ತ ಅವಕಾಶವಿತ್ತು.
ಏತನ್ಮಧ್ಯೆ ರಾಘವೇಂದ್ರ ರಾವ್ ಅವರಿಗೆ 2012ರ ಆ.7ರಂದು ಎಲ್ಲೈಸಿಯಿಂದ ಯಾವುದೇ ಸಹಿ ಇಲ್ಲದ ಪತ್ರವೊಂದು ಬಂದಿತು. ಅದರಲ್ಲಿ ಪಾಲಿಸಿಯ ಬಾಂಡ್ನಲ್ಲಿ ನಮೂದಿಸಿದ್ದಕಿಂತ ಕಡಿಮೆ ಪಿಂಚಣಿಯ ಮೊಬಲಗನ್ನು ನಮೂದಿಸಲಾಗಿತ್ತು. ನಿಮ್ಮ ಆಯ್ಕೆಯನ್ನು ತಿಳಿಸುವಂತೆ ಸೂಚಿಸಲಾಗಿತ್ತು. ಆದರೆ, ಪಾಲಿಸಿ ಬಾಂಡ್ನಲ್ಲಿದ್ದಕ್ಕಿಂತ ಕಡಿಮೆ ಪಿಂಚಣಿ ಮೊಬಲಗು ನಮೂದಿಸಿದ್ದರಿಂದ ಹಾಗೂ ಕಳುಹಿಸಿದವರ ಸಹಿ ಇಲ್ಲದಿದ್ದರಿಂದ ರಾಘವೇಂದ್ರ ರಾವ್ ಅವರಿಗೆ ಆಘಾತವಾಯಿತು.
ತಕ್ಷಣ ಅವರು ಕೆಆರ್ಎಸ್ ರಸ್ತೆಯ ಎಲ್ಲೈಸಿ ಶಾಖೆಗೆ ಹೋಗಿ ವಿಚಾರಿಸಿದರು. ಆಗ ಅವರು ಪತ್ರ ನೀಡಿದರೆ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದರು. ಅದರಂತೆ ಪತ್ರ ನೀಡಿ, ಸ್ವೀಕೃತಿ ಪಡೆದರು. ಆದರೆ, 2013ರ ಫೆ.12 ರವರೆಗೆ ಯಾವುದೇ ಮಾಹಿತಿ ಬರಲಿಲ್ಲ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಸಲಹೆ ಮತ್ತು ಪರಿಹಾರ ಕೋರಲಾಗಿದೆ ಎಂದು ಅಂದು ಪತ್ರ ಬಂದಿತು. ಇದರಿಂದ ಅಸಮಾಧಾನಗೊಂಡ ರಾಘವೇಂದ್ರ ರಾವ್ ಅವರು ಪಾಲಿಸಿ ಬಾಂಡ್ನಲ್ಲಿರುವ ಪ್ರಕಾರ, ಇತ್ಯರ್ಥಪಡಿಸದೆ ನನಗೆ ಮೋಸ ಮಾಡಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಪತ್ರ ಬರೆದರು. ನಂತರ ಹಲವಾರು ಬಾರಿ ದೂರವಾಣಿ ಮೂಲಕ ಸಂಪರ್ಕಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
2013ರ ಮೇ 27 ರಂದು ಎಲ್ಲೈಸಿಯಿಂದ ಮತ್ತೊಂದು ಪತ್ರ ಬಂದಿತು. ಅದರಲ್ಲಿ ನಿಮ್ಮ ಆಯ್ಕೆ ತಿಳಿಸಿ ಎಂದು ಸೂಚಿಸಲಾಗಿತ್ತು. ರಾಘವೇಂದ್ರ ರಾವ್ ಅವರು ಮತ್ತೊಮ್ಮೆ ಎಲ್ಲೈಸಿ ಕಚೇರಿಗೆ ಹೋಗಿ ವಿಚಾರಿಸಿದರು. ಆದರೆ, ಸರಿಯಾದ ಉತ್ತರ ಸಿಗಲಿಲ್ಲ.
ನಂತರ ರಾಘವೇಂದ್ರ ರಾವ್ ಅವರು ಎಲ್ಲೈಸಿ ಕುಂದುಕೊರತೆಗಳ ವಿಭಾಗಕ್ಕೆ ದೂರವಾಣಿ ಕರೆ ಮಾಡಿ, ತಮ್ಮ ಸಮಸ್ಯೆ ವಿವರಿಸಿದರು. 10 ತಿಂಗಳಾದರೂ ತಮ್ಮ ಸಮಸ್ಯೆ ಏಕೆ ಬಗೆಹರಿದಿಲ್ಲ ಎಂದು ಪ್ರಶ್ನಿಸಿದರು. ಆಗ ಆ ಕಡೆಯಿಂದ ಬಂದ ಉತ್ತರ, ನಿಮ್ಮ ಆಯ್ಕೆಯನ್ನು ಮೊದಲು ತಿಳಿಸಿ, ನಂತರ ನಿಮ್ಮ ಸಮಸ್ಯೆ ಕಡೆ ಗಮಹರಿಸುತ್ತೇವೆ ಎಂಬುದು.
ಈ ವರ್ಷದ ಜು.1 ರಂದು ಎಲ್ಲೈಸಿಯಿಂದ ಬಂದ ಪತ್ರದಲ್ಲಿ ಕ್ಲರಿಕಲ್ ಎರರ್ನಿಂದ (ಬರೆಯುವಾಗ, ಬೆರಳಚ್ಚು ಮಾಡುವಾಗ ಆದ ತಪ್ಪು) ಈ ರೀತಿಯಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ. ಆದ್ದರಿಂದ ಯಾವುದೇ ಪೂರ್ವಾಗ್ರಹವಿಲ್ಲದೆ ನಿಮ್ಮ ಆಯ್ಕೆ ತಿಳಿಸಿ, ಈ ಪತ್ರ ದೊರೆತ ಕೂಡಲೇ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ, ರಾಘವೇಂದ್ರ ಅವರು ಇದಕ್ಕೆ ಸಿದ್ಧರಿಲ್ಲ. ಎಲ್ಲೈಸಿಯಂಥ ಸಂಸ್ಥೆಯ ಮೇಲೆ ದೇಶದ ಕೋಟ್ಯಂತರ ಜನ ವಿಶ್ವಾಸವಿರಿಸಿ, ವಿಮೆ ಮಾಡಿಸುತ್ತಾರೆ. ಹೀಗಿರುವಾಗ ವಿಮೆ ಬಾಂಡ್ನಲ್ಲಿರುವಂತೆ ನಡೆದುಕೊಳ್ಳುವುದನ್ನು ಬಿಟ್ಟು, ಈ ರೀತಿ ಮೋಸ ಮಾಡುವುದು ಸರಿಯೇ ಎಂದು ಪ್ರಶ್ನಿಸುತ್ತಾರೆ. ಕ್ಲರಿಕಲ್ ಎರರ್ ಕಂಡು ಹಿಡಿಯಲು 12 ವರ್ಷ ಬೇಕಾಗಿತ್ತೆ. ಈ ರೀತಿ ಎಷ್ಟೊಂದು ಮಂದಿಗೆ ಮೋಸವಾಗಿರಬಹುದು. ನಾನಂತೂ ನ್ಯಾಯ ದೊರಕುವ ತನಕ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಂಶಿ ಪ್ರಸನ್ನಕುಮಾರ್