'ಕಾಂಗ್ರೆಸ್, ಎಡಪಕ್ಷ ಸಿದ್ಧಾಂತ ಒಂದೇ'
ಕ.ಪ್ರ.ವಾರ್ತೆ ಮೈಸೂರು ಜು. 14
ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಸಿದ್ಧಾಂತ ಒಂದೇ ಆಗಿದೆ ಎಂದು ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಆರ್ಎಂಎಸ್ ಮತ್ತು ಎಂಎಂಎಸ್ ನೌಕರರ ಒಕ್ಕೂಟದ ಮೈಸೂರು ಮತ್ತು ಮಂಡ್ಯ ಸಾರ್ಟಿಂಗ್ ಶಾಖೆಗಳ ಜಂಟಿಯಾಗಿ ನಗರದ ಕೃಷ್ಣಮೂರ್ತಿಪುರಂ ಅರಸು ಮಂಡಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕರ್ನಾಟಕ ವಲಯ ಮಟ್ಟದ 29ನೇ ಸಮ್ಮೇಳನದಲ್ಲಿ ಅವರು ಭಾನುವಾರ ಮಾತನಾಡಿದರು.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಕಾರ್ಮಿಕರು, ಬಡವರು, ನೊಂದವರ ಬಗ್ಗೆ, ಎಲ್ಲಾ ಜಾತಿ, ಧರ್ಮ, ಭಾಷಿಕರ ಬಗ್ಗೆ ಸಮಗ್ರವಾಗಿ ಯೋಚನೆ ಮಾಡುತ್ತವೆ ಎಂದು ಹೇಳಿದರು.
ಕಮ್ಯುನಿಸ್ಟ್ ಸಂಘಟನೆ ಕಾರ್ಯಕ್ರಮಕ್ಕೆ ಹೋಗುತ್ತೀರಾ ಎಂದು ಕೆಲವರು ಪ್ರಶ್ನಿಸಿದರು. ಕಮ್ಯುನಿಸ್ಟ್ ಅಥವಾ ಕಾಂಗ್ರೆಸ್ ಸಂಘಟನೆಯಾಗಲಿ ಅಲ್ಲಿರುವವರು ಮನುಷ್ಯರು. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಒಂದೊಂದು ಸಂಘಟನೆಗಳು ಒಂದೊಂದು ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಹೇಳುತ್ತವೆ ಎಂದು ತಿಳಿಸಿದರು.
ಅಂಚೆ ಇಲಾಖೆ ನೌಕರರು ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಹಾಲಿಡೇ ಹೋಂ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಸಲ್ಲಿಸಿದ್ದೀರಿ. ಮನವಿ ಪತ್ರದಲ್ಲಿರುವುದು ಬೇಡಿಕೆಗಳ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನ್ಯಾಷನಲ್ ಫೆಡರೇಷನ್ ಆಫ್ ಪೋಸ್ಟರ್ ಎಂಪ್ಲಾಯಿಸ್ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣನ್ ಮಾತನಾಡಿ, ನಮ್ಮದು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ ಸಂಘಟನೆಯಲ್ಲ. ನಮ್ಮ ಸಂಘಟನೆಯೂ ಸಂಪೂರ್ಣ ರಾಜಕೀಯ ಹೊರತಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸ್ಪಂದಿಸುತ್ತಿಲ್ಲ: ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಮಾತನಾಡಿ, ನಾವು ಎಷ್ಟೇ ಹೋರಾಟ ಮಾಡಿದರೂ ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಕಲ್ಲಿನ ಗೋಡೆಗಳ ನಡುವೆ ಇದ್ದು, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದಾಗಿದ್ದ ಅಂಚೆ ಮತ್ತು ತಂತಿ ಸೇವೆ ಬೇರ್ಪಡಿಸಿದ್ದರಿಂದ ತಂತಿ ಸೇವೆ ಈಗ ರೋಗಗ್ರಸ್ತವಾಗಿದ್ದು, ಮುಚ್ಚುವ ಸ್ಥಿತಿಗೆ ಬಂದಿದೆ. ಅದೇ ರೀತಿ ಬಿಎಸ್ಎನ್ಎಲ್ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುತ್ತಿದೆ. ಇದರಿಂದ ಮುಂದೊಂದು ದಿನ ಬಿಎಸ್ಎನ್ಎಲ್ ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ಒಕ್ಕೂಟದ ಎ. ಆನಂದ, ವಿ. ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಕೆ. ಸೋಮಶೇಖರ್, ಎಐಆರ್ಎಂಎಸ್ ಮತ್ತು ಎಂಎಂಎಸ್ಇಯು ಗ್ರೂಪ್ ಸಿ ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಸಿಂಗ್, ಎಂಜಿ ಮತ್ತು ಎಂಟಿಎಸ್ ಪ್ರಧಾನ ಕಾರ್ಯದರ್ಶಿ ಪಿ. ಸುರೇಶ್, ಗ್ರೂಪ್ ಸಿ ಕರ್ನಾಟಕ ವಲಯ ಮಾಜಿ ಅಧ್ಯಕ್ಷ ಪಿ. ಶೇಷಗಿರಿರಾವ್, ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್, ಆರ್ಐವಿ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ರಂಗೇಗೌಡ, ಆರ್ಐಐಐ ವಲಯ ಕಾರ್ಯದರ್ಶಿ ಎ. ಶ್ರೀನಿವಾಸ, ಆರ್ಐವಿ ವಲಯ ಕಾರ್ಯದರ್ಶಿ ಎಂ. ಮೋಹನ್ ಇದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಜಾಕೀರ್ ಹುಸೇನ್ ನಿರೂಪಿಸಿದರು.