ಕಾಲೇಜು ಅತಿಥಿ ಉಪನ್ಯಾಸಕರ ನೇಮಕ: ಪ್ರಾಂಶುಪಾಲರ ಸುಪರ್ದಿಗೆ
ಕ.ಪ್ರ.ವಾರ್ತೆ ಮೈಸೂರು ಜು. 14
ಹಲವು ಗೊಂದಲಗಳಿಗೆ ಕಾರಣವಾಗಿರುವಂತಹ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಈಗ ಆಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಿಗೆ ವಹಿಸಲಾಗಿದೆ.
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಗೊಂದಲ ಹಾಗೂ ಅನುದಾನ ಬಿಡುಗಡೆಯಲ್ಲಿ ಆಗುತ್ತಿದ್ದ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯು 2013- 14ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಈಗಾಗಲೇ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳನ್ನು ಪರಿಶೀಲಿಸಿ ವಿದ್ಯಾರ್ಹತೆ ಮತ್ತು ಸೇವಾ ಅನುಭವದ ಆಧಾರದ ಮೇಲೆ ಮೇರಿಟ್ ಪಟ್ಟಿ ತಯಾರಿಸಿ ಆಯಾ ಕಾಲೇಜು ಪ್ರಾಂಶುಪಾಲರಿಗೆ ರವಾನಿಸಿದೆ. ಸರ್ಕಾರಿ ಕಾಲೇಜು ಪ್ರಾಂಶುಪಾಲರು ಸಂಬಂಧಪಟ್ಟ ವಿಷಯದಲ್ಲಿ ಮಾತ್ರ ಸ್ನಾತಕೋತ್ತರ ಪದವಿಯಲ್ಲಿ ಶೇ. 55 ಅಂಕ ಪಡೆದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರಾಗಿ ನೇಮಿಸಿಕೊಳ್ಳಬೇಕು. ಸಮಾನಂತರ ವಿಷಯ ಪರಿಗಣಿಸಬಾರದು. ಶೇ. 55 ಅಂಕ ಗಳಿರುವ ಅಭ್ಯರ್ಥಿಗಳು ಸಿಗದಿದ್ದಲ್ಲಿ ಶೇ. 50 ಕಡಿಮೆ ಇರದ ಅಭ್ಯರ್ಥಿಗಳ ಬೋಧನಾ ಸಾಮರ್ಥ್ಯ ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳಬಹುದು. ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಆರಂಭಿಸುವ ಮೊದಲು ಪ್ರತಿಯೊಂದು ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶಾತಿ ಅನುಗುಣವಾಗಿ ಅಗತ್ಯವಿರುವ ಕಾರ್ಯಭಾರ ಲೆಕ್ಕ ಮಾಡಬೇಕು. ಸರ್ಕಾರಿ ಕಾಲೇಜು ಕಾಯಂ ಉಪನ್ಯಾಸಕರುಗಳಿಗೆ ನಿಗದಿತ ಕಾರ್ಯಭಾರ ಹಂಚಿಕೆ ನಂತರ ಉಳಿಕೆ ಇರುವ ಹೆಚ್ಚುವರಿ ಕಾರ್ಯಭಾರವನ್ನು ತಲಾ 2 ಗಂಟೆ ಹಂಚಿಕೆ ಮಾಡಬೇಕು. ಇದರ ನಂತರವು ಹೆಚ್ಚುವರಿ ಕಾರ್ಯಭಾರವು ಕನಿಷ್ಠ 4 ಗಂಟೆ ಇದ್ದಲ್ಲಿ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು. ಕಾಯಂ ಉಪನ್ಯಾಸಕರು ಒಬ್ಬರೇ ಇದ್ದಾಗ ಅವರಿಗೆ ನಿಗದಿಪಡಿಸಿರುವ ಕಾರ್ಯಭಾರದ ಜೊತೆಗೆ ಅವರೇ 4 ಗಂಟೆ ಹೆಚ್ಚುವರಿ ಕಾರ್ಯಭಾರ ನಿರ್ವಹಿಸಬೇಕು.
ವಿಜ್ಞಾನ ಅತಿಥಿ ಉಪನ್ಯಾಸಕರಿಗೆ ಸಂಭಾವನೆ ನೀಡುವಾಗ ಥಿಯರಿ ಮತ್ತು ಪ್ರಾಕ್ಟಿಕಲ್ ತರಗತಿಗಳ ಬೋಧನಾ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸದೆ ಅವರು ನಿರ್ವಹಿಸಿರುವ ಒಂದು ವಾರದಲ್ಲಿನ ಒಟ್ಟು ಬೋಧನಾ ಕಾರ್ಯಭಾರ ಪರಿಗಣಿಸಿ ಗೌರವಧನ ನೀಡಬೇಕು. ಅತಿಥಿ ಉಪನ್ಯಾಸಕರು ವಾರಕ್ಕೆ 4 ಗಂಟೆಗೂ ಕಡಿಮೆಯಾಗದಂತೆ ಕಾರ್ಯ ನಿರ್ವಹಿಸುವ ಅಷ್ಟು ಗಂಟೆಗಳಿಗೆ ಮಾತ್ರ ಸಂಭಾವನೆ ನೀಡಬೇಕು.
ಮುಚ್ಚಳಿಕೆ ಪತ್ರ: ಅತಿಥಿ ಉಪನ್ಯಾಸಕರು ಒಂದೇ ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಸೇವೆ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ಸರ್ಕಾರಿ, ವಿವಿ ಘಟಕದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡ ನಂತರ ಪ್ರಾಂಶುಪಾಲರು ಅವರನ್ನು ಆಯ್ಕೆ ಮಾಡಿಕೊಳ್ಳಬೇಕು.
ಮಹಿಳಾ ಉಪನ್ಯಾಸಕರು ಪ್ರಸೂತಿ ರಜೆ ಮೇಲೆ ತೆರಳಿದಲ್ಲಿ ಅವರ ಕಾರ್ಯಭಾರವನ್ನು ಕಾಯಂ ಉಪನ್ಯಾಸಕರೆ ನಿರ್ವಹಿಸಬೇಕು. ಒಂದು ವೇಳೆ ಕಾಲೇಜಿನ ಕಲಾ ಮತ್ತು ವಾಣಿಜ್ಯ ಉಪನ್ಯಾಸಕರು 16, ವಿಜ್ಞಾನ ಉಪನ್ಯಾಸಕರು 20 ಗಂಟೆ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಅತಿಥಿ ಉಪನ್ಯಾಸಕರನ್ನು ಆಯಾ ವಿವಿ ಕ್ಯಾಲೆಂಡರ್ ಆಫ್ ಇವೆಂಟ್ಸ್ ಪ್ರಕಾರ ಕಾಲೇಜುಗಳಲ್ಲಿ ತರಗತಿಗಳು ಆರಂಭವಾದ ನಂತರ ವರ್ಷಕ್ಕೆ ಗರಿಷ್ಠ 10 ತಿಂಗಳ ಅವಧಿಗೆ ಮಾತ್ರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಆಯುಕ್ತರು ಎಲ್ಲಾ ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.
ಬಿ.ಶೇಖರ್ ಗೋಪಿನಾಥಂ