ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೃಷಿಯಲ್ಲಿ ಆರಂಭ ಕಷ್ಟ; ನಂತರ ಇಲ್ಲ ನಷ್ಟ

Mainashree
Updated On : 15 Jul 2013, 12:00 pm

ಕ.ಪ್ರ.ವಾರ್ತೆ  ಮೈಸೂರು  ಜು. 14
ಇತ್ತೀಚಿನ ಅಂಕಿ, ಅಂಶಗಳ ಪ್ರಕಾರ ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹಳ್ಳಿಯಲ್ಲಿ ವ್ಯವಸಾಯ ಮಾಡುವುದಕ್ಕಿಂತ ಪಟ್ಟಣದಲ್ಲಿ ಯಾವುದಾದರೂ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆದರೆ ಲೇಸು ಎಂಬ ತೀರ್ಮಾನಕ್ಕೆ ರೈತಾಪಿ ವರ್ಗದ ಮಕ್ಕಳು ಬರುತ್ತಿದ್ದಾರೆ. ಹೀಗಿರುವಾಗ ಮೈಸೂರು ನಗರದ ಹೋಟೆಲ್ ಉದ್ಯಮಿಯೊಬ್ಬರು ಕೃಷಿಯತ್ತ ಮುಖ ಮಾಡಿ, ಲಾಭ ಮಾಡುತ್ತಿದ್ದಾರೆ.
ಎಚ್.ಆರ್. ಮೂರ್ತಿ ಅವರೇ ಈ ಉದ್ಯಮಿ. ಇವರು ಹುಣಸೂರು ರಸ್ತೆಯಲ್ಲಿ ಗ್ರ್ಯಾಂಡ್‌ಪಾಸ್ ಕಿಚನ್ ಹೊಟೇಲ್ ಮಾಲೀಕರು. ಮೊದಲು ಈ ಹೋಟೆಲ್ ನಗರದ ಹೃದಯ ಭಾಗವಾದ ಡಿ. ದೇವರಾಜ ಅರಸು ರಸ್ತೆಯಲ್ಲಿತ್ತು. ಅವರು ಕೃಷ್ಣಮೂರ್ತಿಪುರಂನ ಅಶೋಕ ವೃತ್ತದ ಬಳಿ ಇರುವ ನೇಸರ ಆರ್ಗಾನಿಕ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಮೂರ್ತಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಗ್ರಾಮದವರು. ವಾಣಿಜ್ಯ ಉದ್ದೇಶಗಳಿಗಾಗಿ ಮೈಸೂರಿಗೆ ಬಂದವರು. ಹೊಟೇಲ್ ಉದ್ಯಮ ಚೆನ್ನಾಗಿ ನಡೆಯುತ್ತಿದ್ದರೂ ಕೃಷಿಯತ್ತ ಅವರ ಮನಸ್ಸು ತುಡಿಯುತ್ತಿತ್ತು. 2003- 04 ರಲ್ಲಿ ಸ್ನೇಹಿತರೊಬ್ಬರಿಗೆ ಜಮೀನು ಖರೀದಿಸಲೆಂದು ಹೋದಾಗ ಇವರೇ ಖರೀದಿಸಿದರು. ಈ ಜಮೀನು ಎಚ್.ಡಿ. ಕೋಟೆ ತಾಲೂಕು ಗದ್ದಿಗೆ ರಸ್ತೆಯಲ್ಲಿ ಆಲನಹಳ್ಳಿ- ಕ್ಯಾತನಹಳ್ಳಿ ಬಳಿ ಇದೆ.
ಬಂಜೂರು ಭೂಮಿ: ನೀರಾವರಿ ಸೌಲಭ್ಯವಿಲ್ಲದ, ಮಳೆಯಾಶ್ರಿತ ಬಂಜೂರು ಭೂಮಿ. ಕಲ್ಲು ಮಣ್ಣುಗಳಿಂದ ಕೂಡಿತ್ತು. ಅದನ್ನೆಲ್ಲಾ ಸಮತಟ್ಟು ಮಾಡಿದರು, ಎಷ್ಟೇ ಕೊಳವೆ ಬಾವಿ ಕೊರೆಸಿದರೂ ನೀರು ಸರಿಯಾಗಿ ಬರಲಿಲ್ಲ. ಆಗ ಔಷಧಿಯ ಗುಣವುಳ್ಳ ಸಪೇಧ್ ಮುಸ್ಲಿ ಗಿಡಕ್ಕೆ ಭಾರಿ ಬೇಡಿಕೆ ಇತ್ತು. ಮೂರ್ತಿ ಅವರು ಈ ಗಿಡ ಬೆಳೆಸಲು ಹೋಗಿ ಲಕ್ಷಾಂತರ ರು. ನಷ್ಟ ಮಾಡಿಕೊಂಡರು. ನಂತರ ವೆನಿಲಾ ಬೆಳೆಯಲು ಹೋಗಿ ಕೂಡ ಕೈಸುಟ್ಟುಕೊಂಡರು. ಬ್ಯಾಂಕ್‌ನಿಂದ ಪಡೆದಿದ್ದ ಸಾಲ ಏರತೊಡಗಿತು. ಏನೋ ಮಾಡಲು ಹೋಗಿ ಏನೋ ಆಗಿತ್ತು. ಆದರೂ  ಮೂರ್ತಿ ಅವರು ಧೃತಿಗೆಡಲಿಲ್ಲ. ನೀರಿಗೋಸ್ಕರವಾಗಿಯೇ ಪಕ್ಕದ ಭೂಮಿಯನ್ನು ಖರೀದಿಸಿದರು. ಮಣ್ಣಿನ ಫಲವತ್ತತೆ ಕಡೆ ಗಮನ ನೀಡಿದರು.
ಹಲವಾರು ಬೆಳೆ: ಮೊದಲಿಗೆ ಬಾಳೆ, ತೆಂಗು, ನಡುವೆ ಅಂತರ ಬೆಳೆಯಾಗಿ ಮೆಣಸು ಮತ್ತು ಸಪೋಟ ಬೆಳೆದರು. ತೋಟ ನೋಡಲು ಬಂದ ಮೂರ್ತಿ ಅವರ ತಂದೆ ಅಡಕೆ ಇಲ್ಲದ ತೋಟ ತೋಟವೇ ಎಂದು ಪ್ರಶ್ನಿಸಿದರು. ಆಗ ಅಡಕೆ ಸಸಿಗಳನ್ನು ನೆಟ್ಟರು. ನಂತರ ಜಾಯ್‌ಕಾಯ್, ಕ್ಯಾರೆಟ್, ಬೀಟ್‌ರೂಟ್, ಬೀನ್ಸ್, ಹಸಿಮೆಣಸಿನ ಕಾಯಿ, ಗೋರಿಕಾಯಿ ನೇರಳೆ, ಜಂಬುನೇರಳೆ, ಸೀತಾಫಲ ಬೆಳೆದರು. ಲಿಚ್ಚಿ, ಲಕೋಟೆ, ಬ್ರೆಡ್‌ಫ್ರೂಟ್, ವೈಟ್ ಸಪೋಟ, ಪುನರ್‌ಪುಳಿ, ಎಗ್‌ಫ್ರೂಟ್, ಸ್ಟ್ರಾಬರಿ ಇವರ ಜಮೀನಿನಲ್ಲಿರುವ ವಿಶೇಷ ಬೆಳೆಗಳು. ಸುಗಂಧ ದ್ರವ್ಯಕ್ಕೆ ಬಳಸುವ ಪಚೋಲಿ ಕೂಡ ಇದೆ. ಈಗ ರಾಗಿ, ಶುಂಠಿ ಬೆಳೆಯುತ್ತಿದ್ದಾರೆ.
8 ಕೊಳವೆ ಬಾವಿ: ಈಗ 25 ಎಕರೆ ಜಮೀನಿನಲ್ಲಿ 8 ಕೊಳವೆ ಬಾವಿಗಳಿವೆ. ಆದರೆ 6 ರಲ್ಲಿ ನೀರು ಕಡಿಮೆ.
ಇದರಿಂದ ಒಂದು ಕಡೆ ಟ್ಯಾಂಕ್ ಮಾಡಿ, ನೀರು ಸಂಗ್ರಹಿಸುತ್ತಿದ್ದಾರೆ. ಇಲ್ಲಿ ಪದೇ ಪದೇ ವಿದ್ಯುತ್ ಕೈಕೊಡುತ್ತದೆ. ಹೀಗಾಗಿ ಡೀಸೆಲ್ ಮೋಟಾರ್ ಪಂಪ್ ಮೂಲಕ ಜಮೀನಿಗೆ ನೀರು ಹರಿಸುತ್ತಾರೆ.
1000 ತೆಂಗಿನ ಮರ, 7000 ಅಡಕೆ ಮರಗಳಿವೆ. ಇವರು ಕೃಷಿಯಲ್ಲಿ ಸಾಂಪ್ರದಾಯಿಕ ಹಾಗೂ ನೈಸರ್ಗಿಕ- ಎರಡೂ ಪದ್ಧತಿ ಅನುಸರಿಸುತ್ತಾರೆ. ಆದರೆ, ಜಮೀನಿಗೆ ರಾಸಾಯನಿಕ ಗೊಬ್ಬರ, ಕ್ರೀಮಿ ಮತ್ತು ಕೀಟನಾಶಕ ಬಳಸುವುದಿಲ್ಲ. ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ. ಇದಕ್ಕಾಗಿ ಐದಾರು ಜಾನುವಾರು ಸಾಕಿದ್ದಾರೆ. ಈ ಗೊಬ್ಬರ ಸಾಲುವುದಿಲ್ಲ. ಹೊರಗಿನಿಂದ ಕೊಟ್ಟಿಗೆ ಗೊಬ್ಬರ ಖರೀದಿಸುತ್ತಾರೆ. ಜಮೀನಿನಲ್ಲಿ ಕೃಷಿ ಕಾರ್ಮಿಕ ಕುಟುಂಬವೊಂದು ಇದೆ. ಇದಲ್ಲದೇ 8 ರಿಂದ 10 ಹೆಣ್ಣಾಳುಗಳು ಪ್ರತಿದಿನ ಕೆಲಸಕ್ಕೆ ಬರುತ್ತಾರೆ.
7 ಲಕ್ಷ ಆದಾಯ: ವಾರ್ಷಿಕ ಕೂಲಿಗೆ 3.50 ಲಕ್ಷ, ಗೊಬ್ಬರಕ್ಕೆ 2 ಲಕ್ಷ ವೆಚ್ಚವಾಗುತ್ತಿದೆ. ಸದ್ಯ 6 ರಿಂದ 7 ಲಕ್ಷ ಆದಾಯ ಬರುತ್ತಿದೆ. ಬೆಳೆಸುತ್ತಿರುವ ಬೆಳೆಗಳು ಫಲ ನೀಡುವ ಹಂತ ತಲುಪಿದಲ್ಲಿ ಅಂದರೆ ಮುಂದಿನ ಮೂರು ವರ್ಷಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement